ರಾಷ್ಟ್ರೀಯ

ಸಂಸದ ಸಾಕ್ಷಿ ಮಹಾರಾಜ್’ಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ

Pinterest LinkedIn Tumblr

ನವದೆಹಲಿ: ಜನಸಂಖ್ಯಾ ಸ್ಫೋಟ ಕುರಿತಂತೆ ಸಮುದಾಯವೊಂದನ್ನು ಗುರಿಯಾಗಿರಿಸಿಕೊಂಡು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಚುನಾವಣಾ ಆಯೋಗ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ದೇಶದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಹಿಂದೂಗಳು ಕಾರಣರಲ್ಲ. 4 ಪತ್ನಿಯರು, 40 ಮಕ್ಕಳು ಹಾಗೂ ಮೂರು ವಿಚ್ಛೇದನ ಎಂಬ ಪರಿಕಲ್ಪನೆಯನ್ನು ಪಾಲನೆ ಮಾಡುತ್ತಿರುವವರೇ ಕಾರಣ ಎಂದು ಪರೋಕ್ಷವಾಗಿ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ನಂತರ ಮತ್ತೊಂದು ಹೇಳಿಕೆ ನೀಡಿದ್ದ ಸಾಕ್ಷಿ ಮಹಾರಾಜ್ ಅವರು ನಾಲ್ಕು ಪತ್ನಿಯವರು, 40 ಮಕ್ಕಳು, ಮೂರು ವಿಚ್ಛೇದನ ಪಡೆದಿರುವವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಕ್ಕಳನ್ನೇ ಹೊಂದಿರದ ನನಗೆ ಸರ್ಕಾರ ಪ್ರಶಸ್ತಿಯನ್ನು ಕೊಡಬೇಕೆಂದು ಹೇಳಿದ್ದರು.

ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿತ್ತು. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಬಾರದು ಎಂದು ಹೇಳಿತ್ತು.

ಸುಪ್ರೀಂಕೋರ್ಟ್ ಆದೇಶದ ಬಳಿಕವೂ ಸಾಕ್ಷಿ ಮಹಾರಾಜ್ ಅವರು ಈ ರೀತಿಯ ಹೇಳಿಕೆ ನೀಡಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗಿದೆ ಎಂದು ಹೇಳಿರುವ ಚುನಾವಣಾ ಆಯೋಗ ಹೇಳಿಕೆ ಕುರಿತಂತೆ ನಾಳೆಯೊಳಗಾಗಿ ಸ್ಪಷ್ಟನೆ ನೀಡವಂತೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

Comments are closed.