ಕುಂದಾಪುರ: ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಲ್ತೋಡು ಗ್ರಾಮಪಂಚಾಯತಿ ವ್ಯಾಪ್ತಿಯ ಕುಗ್ರಾಮವಾದ ಮೂರೂರು ಎಂಬಲ್ಲಿಗೆ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ನಾಳೆ (ಶನಿವಾರ) ಆಗಮಿಸಲಿದ್ದು ಇದಕ್ಕಾಗಿ ಸಕಲ ತಯಾರಿಗಳು ನಡೆಯುತ್ತಿದೆ.


ಶನಿವಾರ ಬೆಳಿಗ್ಗೆ ಆಗಮಿಸುವ ಸಚಿವ ಆಂಜನೇಯ ಅವರು ಕುಂದಾಪುರದ ಹೆರಂಜಾಲು ಎಂಬಲ್ಲಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ಶಾಲೆ ಉದ್ಘಾಟಿಸಿದ ಬಳಿಕ ಮೂರೂರಿನಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಪಾಲ್ಘೊಳ್ಳಲಿದ್ದಾರೆ. ಅಲ್ಲಿಯೇ ಮಧ್ಯಾಹ್ನದ ಭೋಜನ ಸ್ವೀಕರಿಸಿ ತರುವಾಯ ಸಂಜೆಯವರೆಗೂ ಕೊರಗ ಹಾಗೂ ಆದಿವಾಸಿ ಬುಡಕಟ್ಟು ಜನರ ಜೊತೆಗೆ ಸಮಾಲೋಚನೆ ಸಭೆ ನಡೆಸಲಿದ್ದಾರೆ ಮತ್ತು ಕೊರಗ ಸಮುದಾಯದ ಕಲೆ ಹಾಗೂ ಅವರ ಸಂಪ್ರದಾಯಗಳು, ಕರಕುಶಲತೆಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಸಂಜೆಯ ಬಳಿಕ ಮೂರೂರು ಕೊರಗ ಕಾಲನಿಯ ಮರ್ಲಿ ಕೊರಗ ಅವರ ನಿವಾಸದಲ್ಲಿ ವಾಸ್ತವ್ಯ ಹೂಡುವುದು ಮಾತ್ರವಲ್ಲದೇ ರಾತ್ರಿ ಅವರ ನಿವಾಸದಲ್ಲಿಯೇ ಭೋಜನ ಸ್ವೀಕರಿಸಿ ಹೊಸವರ್ಷದ ಸಂಭ್ರಮವನ್ನು ಮರ್ಲಿ ಕೊರಗರ ಮನೆಯಲ್ಲಿ ಕೊರಗ ನಿವಾಸಿಗಳ ಜೊತೆಯಲ್ಲಿ ಆಚರಿಸಲಿದ್ದಾರೆ.
ಸಚಿವರ ಭೇಟಿ ಹಾಗೂ ವಾಸ್ತವ್ಯದ ಹಿನ್ನೆಲೆ ಈಗಾಗಲೇ ಮೂರೂರು ಗ್ರಾಮದಲ್ಲಿ ಸಕಲ ತಯಾರಿಗಳು ನಡೆದಿದೆ. ನಿತ್ಯವೂ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಕೊರಗ ಮುಖಂದರಾದ ಗಣೇಶ್ ಹಾಗೂ ಮೊದಲಾದವರು, ಐಟಿಡಿಪಿ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಮೂರೂರಿಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಮುತುವರ್ಜಿ ವಹಿಸುತ್ತಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ನೇತ್ರತ್ವದಲ್ಲಿ ಈಗಾಗಲೇ ಜಿಲ್ಲಾ ಮಟ್ಟದ ಹಾಗೂ ಕುಂದಾಪುರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯೂ ನಡೆದಿದೆ. ಸಭೆ ಹಾಗೂ ಸಮಾಲೋಚನೆ ನಡೆಯುವ ಮೂರೂರು ಸಮೀಪದ ಮೈದಾನದಲ್ಲಿ ಬ್ರಹತ್ ಸಭಾಂಗಣದ ವ್ಯವಸ್ಥೆಮಾಡಲಾಗಿದ್ದು ಅಲ್ಲಿಯೇ ಊಟೋಪಚಾರಕ್ಕೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ ವಾಸ್ತವ್ಯ ಹೂಡುವ ಮರ್ಲಿ ಕೊರಗರ ಮನೆ ಹಿಂಭಾಗದಲ್ಲಿ ಸಚಿವರಿಗಾಗಿ ವಿದೇಶಿ ಶೈಲಿಯ ಶೌಚಾಲಯ ವ್ಯವಸ್ಥೆಮಾಡಲಾಗಿದೆ. ರಾತ್ರಿ ಸಚಿವರಿಗೆ ಕೊರಗರ ಮನೋರಂಜನೆ ನೀಡಲು ಅನುಕೂಲವಾಗುವಂತೆ ಒಂದು ಸಭಾಂಗಣ ಮಾಡಲಾಗಿದೆ. ಅಲ್ಲದೇ ಆಗಮಿಸುವ ಗಣ್ಯರು ಮತ್ತು ಪೊಲೀಸರು ತಂಗಲು ಎರಡು ಪ್ರತ್ಯೇಕ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಕಾಲನಿಗೆ ತೆರಳಲು ಅನುಕೂಲಕ್ಕಾಗಿ ನೀರಿನ ಹರಿವು ಇದ್ದ ಪ್ರದೇಶಕ್ಕೆ ಮಣ್ಣು ತುಂಬಿಸಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿದೆ. ಕಾಡು ಪ್ರದೇಶವಾದ ಕಾರಣ ಸಚಿವರ ಭದ್ರತೆಗೆ ಪೊಲೀಸ್ ಬಂದೋಬಸ್ತ್ ಇರಲಿದೆ.
————————————
ಚಿತ್ರ, ವರದಿ- ಯೋಗೀಶ್ ಕುಂಭಾಸಿ
Comments are closed.