
ಮಂಗಳೂರು, ಡಿಸೆಂಬರ್.21: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು 40 ವರ್ಷಗಳಿಂದ ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದರೂ ರಾಜ್ಯ ಸರಕಾರ ಈ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಬದಲಾಗಿ ನಿರಂತರ ಶೋಷಣೆ ಮಾಡಿ ಕಾರ್ಯಕರ್ತೆಯರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಸುಳ್ಯದ ಅಂಗನವಾಡಿ ಕಾರ್ಯಕರ್ತೆ ಜಯಂತಿ ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘವು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದ.ಕ. ಜಿಪಂ ಕಚೇರಿ ಮುಂದೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾರ್ಯಕತೆರ್ಯರಿಗೆ ಕೇವಲ 6 ಸಾವಿರ ರೂ. ವೇತನ ಸಿಗುತ್ತಿದೆ. ಅದರಲ್ಲೂ ಸಹಾಯಕಿಯರಿಗೆ ಬರೀ 3 ಸಾವಿರ ರೂ.ನೀಡಲಾಗುತ್ತದೆ. ಇದರಲ್ಲಿಯೇ ಅಂಗನವಾಡಿಯ ವಿದ್ಯುತ್ ಬಿಲ್, ಗ್ಯಾಸ್ ಕಟ್ಟುವ ಪ್ರಮೇಯ ಬರುತ್ತಿದೆ. ಉಳಿದ ವೇತನದಿಂದ ಯಾವ ರೀತಿಯಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಎಂದವರು ಪ್ರಶ್ನಿಸಿದರು.

ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪಾ, ಶಾರದಾ ಹಾಗೂ ಅರುಣಾ ಪುತ್ತೂರು ಮಾತನಾಡಿ, ಸೇವಾ ಹಿರಿತನದ ಮೇಲೆ ಗೌರವಧನ ಹೆಚ್ಚಿಸಬೇಕು. ಅಂಗನವಾಡಿಯ ವಿದ್ಯುತ್ ವೆಚ್ಚವನ್ನು ಸರಕಾರ ಭರಿಸಬೇಕು. ದಿನ ಭತ್ತೆ ಹೆಚ್ಚಳ, ಪ್ರಭಾರ ಭತ್ತೆಯನ್ನು ಹೆಚ್ಚಿಸುವ ಮೂಲಕ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಾಯಕಿಯರಿಗೆ ನೆರವಾಗಬೇಕು.ಅಂಗನವಾಡಿಯಲ್ಲಿ ಸಾಕಷ್ಟು ಕೆಲಸ ಇರುತ್ತದೆ. ದಿನನಿತ್ಯ 29 ನೋಂದಣಿಗಳನ್ನು ಸಂಪೂರ್ಣ ಮಾಡಬೇಕು. ವೈದ್ಯಕೀಯ ರಜೆಯಂತೂ ಸಿಗುವುದೇ ಇಲ್ಲ. ಈ ಕುರಿತು ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯ ಆರಂಭದಲ್ಲಿ ನಗರದ ಲಾಲ್‌ಭಾಗ್ ಸಮೀಪವಿರುವ ಕರಾವಳಿ ಉತ್ಸವ ಮೈದಾನದಿಂದ ಬೃಹತ್ ರ್‍ಯಾಲಿಯನ್ನು ಆಯೋಜಿಸಲಾಗಿತ್ತು.
ಪ್ರತಿಭಟನಾ ಸಭೆಯ ಬಳಿಕ ಶಾಸಕ ಜೆ.ಆರ್.ಲೋಬೊ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರು.
Comments are closed.