
ಮಳವಳ್ಳಿ: ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಇಬ್ಬರನ್ನು ಚಾಕುವಿನಿಂದ ಇರಿದು ಬರ್ಭರವಾಗಿ ಹತ್ಯೆಗೈದಿರುವ ಘಟನೆ ತಾಲ್ಲೂಕಿನ ನೆಲಮಾಕನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.
ನೆಲಮಾಕನಹಳ್ಳಿ ನಿವಾಸಿಗಳಾದ ಶರಾವತಿ (೩೫) ಹಾಗೂ ಸತೀಶ (೨೮) ಎಂಬುವವರೇ ಕೊಲೆಗೀಡಾದವರು. ಶರಾವತಿಯ ಪತಿ ಸಿದ್ದೇಗೌಡ ಕೊಲೆ ಆರೋಪದಡಿ ಕಳೆದ ೮ ವರ್ಷದ ಹಿಂದೆ ಜೀವಾವದಿ ಶಿಕ್ಷೆಗೆ ಒಳಪಟ್ಟು ಜೈಲು ಸೇರಿದ್ದಾನೆ. ಇವರಿಗೆ ೧೨ ವರ್ಷದ ಮಗ ಆನಂದ ಇದ್ದಾನೆ. ಸಿದ್ದೇಗೌಡ ಜೈಲು ಪಾಲಾದ ನಂತರ ಇದೇ ಗ್ರಾಮದ ಸತೀಶ ಎಂಬಾತನು ಶರಾವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ನಿನ್ನೆ ರಾತ್ರಿ ಸತೀಶ ಶರಾವತಿಯ ಮನೆಯಲ್ಲಿಯೇ ಉಳಿದಿದ್ದನು. ಸುಮಾರು ೧೨ ಗಂಟೆ ಸಮಯದಲ್ಲಿ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಶರಾವತಿಯ ಮನೆ ಬಾಗಿಲು ತಟ್ಟಿದ್ದಾರೆ. ತಕ್ಷಣ ಶರಾವತಿ ಬಾಗಿಲನ್ನು ತೆರೆದು ಹೊರಗೆ ನೋಡುವಷ್ಟರಲ್ಲಿ ದುಷ್ಕರ್ಮಿಗಳು ಆಕೆಯನ್ನು ತಳ್ಳಿಕೊಂಡು ಒಳಗೆ ಹೋಗಿ ಚಾಕುವಿನಿಂದ ಕತ್ತನ್ನು ಕತ್ತರಿಸಿ ಬರ್ಭರವಾಗಿ ಹತ್ಯೆಗೈದರು.
ಈ ಘಟನೆ ನಡೆಯುತ್ತದೆ ಎಂಬ ಆಲೋಚನೆ ಇಲ್ಲದ ಶರಾವತಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಳು. ಈ ಹತ್ಯೆಯನ್ನು ನೋಡುತ್ತಿದ್ದ ಸತೀಶ ಬಿಡಿಸಲು ಮುಂದಾದಾಗ ದುಷ್ಕರ್ಮಿಗಳು ಆತನ ಎದೆಗೂ ಚಾಕುವಿನಿಂದ ಮನ ಬಂದಂತೆ ಇರಿದು ಕೊಲೆಗೈದರು. ಈ ದುರ್ಘಟನೆಯನ್ನು ನೋಡುತ್ತಾ ನಿಂತಿದ್ದ ಶರಾವತಿಯ ಮಗ ಆನಂದನನ್ನು ದುಷ್ಕರ್ಮಿಗಳು ಕಾಲಿನಿಂದ ಒದೆದು ಆತ ಕೆಳಗೆ ಬಿದ್ದ ನಂತರ ಹೊರಗೆ ಬಂದು ಕಾರಿನಲ್ಲಿ ಪರಾರಿಯಾದರು.
ತನ್ನ ಕಣ್ಣೇದುರೆ ನಡೆದ ತಾಯಿಯ ಈ ಭೀಕರ ಕೊಲೆಯನ್ನು ನೋಡಿ ಭಯಭೀತನಾಗಿದ್ದ ಆನಂದ ಸ್ವಲ್ಪ ಸಮಯದ ನಂತರ ಮನೆ ಹೊರಗೆ ಬಂದು ಅಕ್ಕ ಪಕ್ಕದವರನ್ನು ಸಹಾಯಕ್ಕಾಗಿ ಅಳುತ್ತಾ ಕಿರುಚಿದನು. ತಕ್ಷಣ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಶರಾವತಿ ಹಾಗೂ ಸತೀಶ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದದ್ದು ಕಂಡು ಬಂದಿತು. ಕೂಡಲೇ ಈ ವಿಷಯವನ್ನು ಮಳವಳ್ಳಿ ಗ್ರಾಮಾಂತರ ಪೋಲಿಸರಿಗೆ ತಿಳಿಸಿದರು.
ಸ್ಥಳಕ್ಕೆ ಡಿವೈ ಎಸ್ ಪಿ ಮ್ಯಾಥ್ಯು ಥಾಮಸ್, ಸಿಪಿಐ ಶ್ರೀಕಾಂತ್, ಪಿ ಎಸ್ ಐ ರವಿಕುಮಾರ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಕೊಲೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದಿರಬಹುದೆಂದು ಶಂಕಿಸಲಾಗಿದೆ. ಈ ಸಂಬಂಧ ಮಳವಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.