ಮನೋರಂಜನೆ

ನೋಟು ನಿಷೇಧ: ಚಿತ್ರೀಕರಣ ನಡೆಯಬೇಕಾಗಿದ್ದ 60 ಚಿತ್ರಗಳ ಸಂಖ್ಯೆ 20ಕ್ಕೆ ಇಳಿಕೆ

Pinterest LinkedIn Tumblr

kundapura_bablusha_film-11ಬೆಂಗಳೂರು, ಡಿ. ೫- ಕೇಂದ್ರ ಸರ್ಕಾರ 500 ಮತ್ತು 1000 ರೂ. ನೋಟುಗಳನ್ನು ರದ್ದುಪಡಿಸಿದ್ದರಿಂದ ಚಿತ್ರಿಕರಣ ನಡೆಯಬೇಕಾಗಿದ್ದ 60 ಚಿತ್ರಗಳ ಸಂಖ್ಯೆ ಈಗ 20ಕ್ಕೆ ಇಳಿದಿದ್ದು, ತೆರೆ ಕಾಣಬೇಕಾಗಿದ್ದ ಚಿತ್ರಗಳ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ. ಪ್ರಸ್ತುತ ಕನ್ನಡ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ ಕನ್ನಡ ಚಿತ್ರರಂಗದ ಮೇಲೆ ಏಕರೂಪ ತೆರಿಗೆ ಹಾಗೂ ನೋಟು ಅಪಮೌಲೀಕರಣದ ಪರಿಣಾಮ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಚಿತ್ರ ನಿರ್ಮಾಣದಲ್ಲಿ ನಗದು ವ್ಯವಹಾರವೇ ಹೆಚ್ಚಿರುವುದರಿಂದ ನೋಟು ರದ್ದತಿಯಿಂದಾಗಿ ತೀವ್ರ ಕಷ್ಟವನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.
ಏಕರೂಪದ ತೆರಿಗೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಈ ಬಗ್ಗೆಯು ಚಿತ್ರೋಧ್ಯಮ ಒಂದಾಗಿ ಚರ್ಚಿಸಲಿದೆ ಎಂದ ಅವರು, ದಿನದ ಲೆಕ್ಕದಲ್ಲಿ ಕೆಲಸ ಮಾಡುವ ಸಿನಿಮಾ ಕಾರ್ಮಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದರು.
ಏಕರೂಪದ ತೆರಿಗೆ ಜಾರಿಯಿಂದ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದೇ ಆಗಬಹುದು. ಈಗ ನಾನಾ ಹಂತಗಳಲ್ಲಿ ತೆರಿಗೆಯನ್ನು ಪಾವತಿಸುತ್ತಿದ್ದೇವೆ. ಅದೆಲ್ಲಾ ಸೇರಿದರೆ ಏಕರೂಪದ ತೆರಿಗೆಯಷ್ಟೇ ಆಗಬಹುದು. ಏಕರೂಪದ ತೆರಿಗೆಯಿಂದಾಗಿ ಚಿತ್ರರಂಗದ ವ್ಯವಹಾರದಲ್ಲಿ ಪಾರದರ್ಶಕತೆ ಬರುವುದರಿಂದ ಈಗ ಚಿತ್ರ ನಿರ್ಮಾಣದಲ್ಲಿ ಲೆಕ್ಕವೇ ಸಿಗುತ್ತಿಲ್ಲದಿರುವ ಪರಿಸ್ಥಿತಿ ಬದಲಾಗಬಹುದು ಎಂದು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ರಾಕ್‌ಲೈನ್ ವೆಂಕಟೇಶ್ ಅವರು ಹೇಳಿದರು. ಅಲ್ಲದೆ ಈ ವಿಚಾರಗಳ ಕುರಿತಂತೆ ಮಂಡಳಿ ಅಧ್ಯಕ್ಷರು ವಿಶೇಷ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದರು.
ಮಂಡಳಿಯ ಮಾಜಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾತನಾಡಿ, ಕಳೆದ ಅಕ್ಟೋಬರ್‌ನಲ್ಲಿದ್ದ ಚಿತ್ರ ಪ್ರದರ್ಶನದ ಹಣ ಸಂಗ್ರಹದಲ್ಲಿ ನೋಟು ರದ್ದತಿಯ ನಂತರ ಶೇ. 50ಕ್ಕೆ ಇಳಿದಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ. ಇದು ಆತಂಕದ ಬೆಳವಣಿಗೆಯಾಗಿದೆ ಎಂದ ಅವರು, ನಗದು ಹಣಕ್ಕೆ ಬದಲಾಗಿ ಟಿಕೇಟ್ ಖರೀದಿಸಲು ಸ್ವೈಪ್ ಮಾಡುವ ಪದ್ಧತಿಯನ್ನು ಜಾರಿಗೆ ತರುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.
ಚಿತ್ರನಿರ್ಮಾಣ, ವಿತರಣೆ ಮತ್ತು ಪ್ರದರ್ಶನ ಈ ಮೂರರ ಮೇಲೆ ಏಕರೂಪದ ತೆರಿಗೆ ಯಾವ ರೀತಿ ವಿಧಿಸಲಾಗುತ್ತದೆ ಎನ್ನುವುದರ ಸ್ಪಷ್ಟತೆ ಬೇಕು ಎಂದು ಅವರು ಹೇಳಿದರು.
ಸಂವಾದದಲ್ಲಿ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ವಿತರಕರಾದ ಕುಮಾರ್, ವಿಮರ್ಶಕ ವಿದ್ಯಾಶಂಕರ್, ಲೆಕ್ಕಪರಿಶೋಧಕ ತಜ್ಞ ವಿವೇಕ್ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.

Comments are closed.