ಬೆಂಗಳೂರು: ನೋಟು ರದ್ದತಿಯಿಂದಾಗಿ ದೇಶದ ಸುಮಾರು ನಾಲ್ಕು ಲಕ್ಷ ಮಂದಿ ಕಾರ್ಮಿಕರು ತಾತ್ಕಾಲಿಕವಾಗಿ ಕೆಲಸ ಕಳೆದುಕೊಳ್ಳುವಂತಾಗಿದೆ.
ಕಟ್ಟಡ ನಿರ್ಮಾಣ ಕಾರ್ಮಿಕರು, ಟೆಕ್ಸ್ಟೈಲ್, ಗಾರ್ಮೆಂಟ್ ವಲಯದ ದಿನಗೂಲಿ ನೌಕರರು ಸೇರಿದಂತೆ ಅನೇಕ ಕಾರ್ಮಿಕರಿಗೆ ನೋಟು ರದ್ದತಿಯಿಂದ ಅನನುಕೂಲ ಉಂಟಾಗಿದೆ. ಈ ನೌಕರರು ಕೆಲ ದಿನಗಳ ಮಟ್ಟಿಗಾದರೂ ಕೆಲಸ ಕಳೆದುಕೊಳ್ಳುವುದು ಈಗ ಅನಿವಾರ್ಯ ಎಂಬಂತಾಗಿದೆ.
ನೋಟು ರದ್ದತಿಯಿಂದಾಗಿ ನಗದು ಹಣ ಚಲಾವಣೆ ಕಡಿಮೆಯಾಗಿದೆ. ಇದರಿಂದ ದಿನಗೂಲಿ ಕಾರ್ಮಿಕರಿಗೆ ಸಂಬಳ ನೀಡುವುದು ಕಷ್ಟವಾಗುತ್ತಿದೆ. ಅಲ್ಲದೆ, ನೋಟು ರದ್ದತಿಯಿಂದ ಕಪ್ಪು ಹಣದ ಮೇಲೆ ಕಡಿವಾಣ ಬಿದ್ದಿರುವ ಕಾರಣ ಬಹುತೇಕ ನಿರ್ಮಾಣ ಕಾಮಗಾರಿಗಳು ನಿಂತಿವೆ. ಇಂಥಲ್ಲಿ ಕೆಲಸ ಮಾಡುವ ಕಾರ್ಮಿಕರು ಈಗ ಕೆಲಸವಿಲ್ಲದೆ ಕೂರುವಂತಾಗಿದೆ.
‘ನಿರ್ಮಾಣ ಕಾಮಗಾರಿಗಳಲ್ಲಿ ಶೇಕಡ 70ಕ್ಕೂ ಹೆಚ್ಚು ಕಪ್ಪುಹಣದ ವಹಿವಾಟು ನಡೆಯುತ್ತಿತ್ತು. ನೋಟು ರದ್ದತಿಯಿಂದಾಗಿ ಇಂಥ ಕಾಮಗಾರಿಗಳು ಸದ್ಯ ನಿಂತಿವೆ. ಇದರಿಂದ ದಿನಗೂಲಿ ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದೆ’ ಎಂಬುದು ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರ ಅಭಿಪ್ರಾಯ.
ಉತ್ತರ ಭಾರತದ ವಲಸೆ ಕಾರ್ಮಿಕರ ಪೈಕಿ ವಾರ, ಹದಿನೈದು ದಿನಕ್ಕೊಮ್ಮೆ ನೇರವಾಗಿ ನಗದು ಸಂಬಳ ಪಡೆಯುವವರೇ ಹೆಚ್ಚು. ಇಂಥವರಿಗೆ ನೋಟು ರದ್ದತಿಯಿಂದ ತೀವ್ರ ತೊಂದರೆಯಾಗಿದೆ ಎನ್ನುತ್ತಾರೆ ಅವರು.
ಇನ್ನು ಬ್ಯಾಂಕ್ ಖಾತೆ ಹೊಂದಿರುವ ದಿನಗೂಲಿ ನೌಕರರೂ ಖಾತೆಗೆ ಸಂಬಳ ವರ್ಗಾವಣೆಗೆ ಹಿಂದೇಟು ಹಾಕುತ್ತಿದ್ದಾರೆ.
‘ಬ್ಯಾಂಕ್ ಖಾತೆ ಮೂಲಕ ಸಂಬಳ ಪಡೆದರೆ ವಾರ್ಷಿಕ ₹ 50,000 ಆದಾಯದ ಮಿತಿ ಮೀರುತ್ತದೆ. ಇದರಿಂದ ಬಡತನ ರೇಖೆಗಿಂತ ಕೆಳಗಿನವರಿಗೆ (ಬಿಪಿಎಲ್) ಸಿಗುವ ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ. ಈ ಕಾರಣದಿಂದ ಬ್ಯಾಂಕ್ ಖಾತೆ ಇರುವವರೂ ಖಾತೆಗೆ ಸಂಬಳ ವರ್ಗಾವಣೆಗೆ ಒಪ್ಪುತ್ತಿಲ್ಲ’ ಎನ್ನುತ್ತಾರೆ ಎಂಜಿನಿಯರಿಂಗ್ ಎಕ್ಸ್ಪೋರ್ಟ್ ಪ್ರೊಮೋಷನ್ ಕೌನ್ಸಿಲ್ನ ಉಪಾಧ್ಯಕ್ಷ ರವಿ ಸೆಹಗಲ್.
Comments are closed.