ಕರಾವಳಿ

ವ್ಯಕ್ತಿಯೋರ್ವನಿಂದ ರಸ್ತೆಗೆ ಸೋಡಾ ಬಾಟ್ಲಿ ಎಸೆತ : ಕಲ್ಲಡ್ಕ ಪರಿಸರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ

Pinterest LinkedIn Tumblr

Kalladka_Police_Protc_1

File Photo

ಬಂಟ್ವಾಳ, ನ. 12: ವ್ಯಕ್ತಿಯೋರ್ವನ ಪುಂಡಾಟಿಕೆಯಿಂದಾಗಿ ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ಶುಕ್ರವಾರ ನಡೆದಿದ್ದು, ಘಟನೆಯಿಂದಾಗಿ ಸ್ಥಳದಲ್ಲಿ ಜನರು ಜಮಾಯಿಸಿದ ಪರಿಣಾಮ ಪರಿಸರದಲ್ಲಿ ಮತ್ತಷ್ಟು ಉದ್ವಿಗ್ನದ ವಾತವರಣ ನಿರ್ಮಾಣಗೊಂದಿತ್ತು.

ಕಲ್ಲಡಕದ ಅಂಗಡಿಯೊಂದರ ಎದುರಿನ ರಸ್ತೆಗೆ ವ್ಯಕ್ತಿಯೋರ್ವ ಸೋಡಾ ಬಾಟ್ಲಿ ಎಸೆದಿದ್ದು, ಈತ ಎಸೆದ ಬಾಟ್ಲಿ ಅಂಗಡಿಯೊಂದರ ಮುಂಭಾಗ ರಸ್ತೆಯಲ್ಲಿ ಬಿದ್ದು ಪುಡಿಯಾಗಿದೆ. ಇದರಿಂದ ಶುಕ್ರವಾರ ಸಂಜೆ ಪರಿಸರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತು. ಸುದ್ಧಿ ಹಬ್ಬುತಿದ್ದಂತೆ ಸ್ಥಳದಲ್ಲಿ ಜನರು ಜಮಾಯಿಸತೊಡಗಿದರು. ಮೊದಲೇ ಸೂಕ್ಷ್ಮ ಸ್ಥಳವಾದ ಕಲ್ಲಡ್ಕ ಪರಿಸರದಲ್ಲಿ ನಡೆದ ಈ ಘಟನೆಯ ಗಂಭೀರತೆಯನ್ನು ಅರಿತ ಕಲ್ಲಡ್ಕದಲ್ಲಿ ಬಂದೋಬಸ್ತ್ನಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಂಟ್ವಾಳ ನಗರ ಠಾಣೆ ಎಸ್ಸೈ ನಂದಕುಮಾರ್ ಬಂದೋಬಸ್ತ್ಗೆ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್., ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ಕಾರ್ಯಾಚರಣೆ ನಡೆಸಿ ಬಾಟ್ಲಿ ಎಸೆದ ಸುಂದರ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳ ತಾಲೂಕಿನ ಕಲ್ಲಡ್ಕ, ಬಂಟ್ವಾಳ, ಬಿ.ಸಿ.ರೋಡ್ ಮೊದಲಾದ ಆಯಕಟ್ಟಿನ ಸ್ಥಳಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಎಸ್ಪಿ ಭೂಷಣ್ ಜಿ. ಬೊರಸೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ. ಜಗದೀಶ್ ಕೂಡ ಬಂಟ್ವಾಳಕ್ಕೆ ಭೇಟಿ ನೀಡಿ ನಗರ ಠಾಣೆಯಲ್ಲಿ ಮೊಕ್ಕಾಂ ಹೂಡಿರುವ ಎಸ್ಪಿ ಬೊರಸೆಯವರೊಂದಿಗೆ ಘಟನೆಯ ಮಾಹಿತಿ ಪಡೆದಿದ್ದಾರೆ.

ಕುತ್ತಾರ್ ಸಮೀಪ ನಡೆದ ಕೊಲೆ ಯತ್ನ ಹಾಗೂ ಮೈಸೂರು ಜೈಲಿನಲ್ಲಿ ಮಂಗಳೂರು ಕಾವೂರು ನಿವಾಸಿ ಮುಸ್ತಫಾ ಎಂಬಾತನ ಹತ್ಯಾ ಪ್ರಕರಣದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಜಿಲ್ಲಾದ್ಯಂತ ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಹಾಗೆಯೇ ಕಲ್ಲಡ್ಕದಲ್ಲಿ ಬಾಟ್ಲಿ ಎಸೆತಕ್ಕೆ ಸಂಬಂಧಿಸಿಯೂ ಓರ್ವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಲ್ಲಡ್ಕ ಸೇರಿದಂತೆ ಬಂಟ್ವಾಳದಾದ್ಯಂತ ಪರಿಸ್ಥಿತಿ ಸಂಪೂರ್ಣ ಶಾಂತಿಯುತವಾಗಿದೆ ಎಂದ ಅವರು ಜನರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿ ಕೊಡದೆ ಶಾಂತಿ ಕಾಪಾಡುವಂತೆ ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆಯವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Comments are closed.