
ಮಂಗಳೂರು,ನವೆಂಬರ್.10: ದ.ಕ. ಜಿ.ಪಂ.ಆವರಣದಲ್ಲಿ ಇಂದು ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ವ್ಯಾಪಕ ಸಿದ್ದತೆ ನಡೆಸಿದೆ.ಪೊಲೀಸ್ ಇಲಾಖೆಯು ನಗರದ ವಿವಿಧ ಭಾಗಗಳ ಆಯಕಟ್ಟಿನ ಪ್ರದೇಶಗಳಲ್ಲಿ ಸಿಬಂದಿ ನಿಯೋಜಿಸಿ ಬಿಗಿಭದ್ರತೆಗೆ ಕ್ರಮ ಕೈಗೊಂಡಿದೆ.


ಈಗಾಗಲೇ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಯಾವೂದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂದಾಗಿರುವ ಜಿಲ್ಲಾಡಳಿತವು ನ. 12ರ ಸಂಜೆ ಆರು ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಮಾತ್ರ ಟಿಪ್ಪು ಜಯಂತಿ ಆಚರಣೆ ಇರುವುದಾದರೂ ಜಿಲ್ಲೆಯ ಎಲ್ಲ ಕಡೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ನಗರದ ಹೊರ ವಲಯದ ಆಡ್ಯಾರ್ ಬಳಿ ಟಿಪ್ಪುವನ್ನು ಬೆಂಬಲಿಸಿ ಅನಧಿಕೃತವಾಗಿ ಹಾಕಲಾದ ಬ್ಯಾನರ್ ಅನ್ನು ಬುಧವಾರ ರಾತ್ರಿ ಪೊಲೀಸರು ತೆರವುಗೊಳಿಸಿದ್ದಾರೆ.

ಬಿಗಿಭದ್ರತೆಯ ದೃಷ್ಟಿಯಿಂದ ನಗರದ ಭಾರತ್ ಮಾಲ್ ಬಳಿ, ಜೆಪ್ಪು, ಕೊಟ್ಟಾರ, ಕೂಳೂರು, ಸುರತ್ಕಲ್, ಪಂಪ್ವೆಲ್ ಮುಂತಾದೆಡೆ ಪೊಲೀಸ್ ಸಿಬಂದಿ ಹಾಗೂ ತಾಂತ್ರಿಕ ತಜ್ಞರು ಸೇರಿ 4 ಡ್ರೋನ್ಗಳ ಹಾರಾಟ ನಡೆಸಿ ಚಿತ್ರೀಕರಣ ನಡೆಸಲಾಗಿದೆ. ಡ್ರೋನ್ ಅಲ್ಲದೆ ಖಾಸಗಿ ಕೆಮೆರಾಮೆನ್ಗಳನ್ನು ಕೂಡ ಪೊಲೀಸರು ನಿಯೋಜಿಸಿಕೊಂಡಿದ್ದು ಶಂಕಾಸ್ಪದ ವ್ಯಕ್ತಿಗಳ ಪತ್ತೆ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಡ್ರೋನ್ ಬುಧವಾರ ಕೂಡ ಹಾರಾಟ ನಡೆಸಿ ಪರಿಸ್ಥಿತಿಯ ಮೇಲೆ ಗಮನ ಇರಿಸಿ ಚಿತ್ರೀಕರಣ ನಡೆಸಲಿದೆ.

ಚೆಕ್ ಫೋಸ್ಟ್ ಗಳಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಿರುವ ಪೊಲೀಸ್ ಇಲಾಖೆ, ಅಗತ್ಯ ಸಿಬಂದಿಯನ್ನು ಕೂಡ ಪೂರೈಕೆ ಮಾಡಿದೆ. ಈಗಾಗಲೇ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು 60 ಸಿಸಿ ಕೆಮರಾಗಳನ್ನು ಅಳವಡಿಸಸಿದ್ದಾರೆ. ನಾಲ್ಕು ಹೈ ರೆಸೆಲ್ಯೂಶನ್ ಡ್ರೋನ್ ಕ್ಯಾಮರಾಗಳು ಕಾರ್ಯಾಚರಿಸಲಿವೆ. ಇನ್ನು ಅಲ್ಲಲ್ಲಿ ಪೊಲೀಸ್ ಕಣ್ಗಾವಲಿರುತ್ತದೆ. ಗಡಿ ಪ್ರದೇಶಗಳಲ್ಲಿಯೂ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ.

ಕೇರಳ ಸಹಿತ ಹೊರಗಿನ ಪೊಲೀಸರನ್ನು ಕರೆಸಲಾಗಿದೆ. 150 ಮಂದಿ ಕೇರಳ ಪೊಲೀಸರ ಒಂದು ಪಡೆ ಈಗಾಗಲೇ ಮಂಗಳೂರಿಗೆ ಆಗಮಿಸಿದೆ. ನಗರಾದ್ಯಂತ ಈ ಮೂಲಕ ಪ್ರತೀ ಪ್ರದೇಶದ ಮಾಹಿತಿಯನ್ನು ಪೊಲೀಸರು ಕಲೆಹಾಕಲಿದ್ದು, ಶಾಂತಿ ಕದಡುವಲ್ಲಿ ಯಾರದ್ದಾದರೂ ಪಾತ್ರ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಇನ್ನು ಟಿಪ್ಪು ಜಯಂತಿ ಆಚರಣೆಗೆ ಅಡಚಣೆಯಾಗದಂತೆ ಈಗಾಗಲೇ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ 190 ಮಂದಿ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ 106 ಮಂದಿಯಿಂದ ಬಾಂಡ್ ಬರೆಸಿಕೊಳ್ಳಲಾಗಿದೆ.
Comments are closed.