ಅಲ್ಜೀರಿಯಾ :ಸ್ಕಿಕ್ಡಾ ಆಸ್ಪತ್ರೆಯೊಂದರ ವೈದ್ಯರ ತಂಡವು 73ರ ಹರೆಯದ ವೃದ್ಧೆಯೋರ್ವಳು ಕಳೆದ 35 ವರ್ಷಗಳಿಂದಲೂ ತನ್ನ ಉದರದಲ್ಲಿ ಮರಗಟ್ಟಿದ್ದ ಭ್ರೂಣವನ್ನು ಹೊತ್ತುಕೊಂಡಿದ್ದ ಅಪರೂಪದ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.
ಅಂದ ಹಾಗೆ ಈ ಭ್ರೂಣದಿಂದ ವೃದ್ಧೆಗೆ ಯಾವುದೇ ತೊಂದರೆಯಾಗಿರಲಿಲ್ಲ. ಕಳೆದ ವಾರ ಅಸಾಧಾರಣವಾದ ಹೊಟ್ಟೆನೋವು ಕಾಣಿಸಿಕೊಳ್ಳುವವರೆಗೂ ಆಕೆ ಸಹಜ ಬದುಕನ್ನು ನಡೆಸಿದ್ದಳು.
ಆಸ್ಪತ್ರೆಯಲ್ಲಿ ಆಕೆಯನ್ನು ತಪಾಸಣೆಗೊಳಪಡಿಸಿದ ವೈದ್ಯರಿಗೆ ಆಶ್ಚರ್ಯ ಕಾದಿತ್ತು. ಎಕ್ಸರೇ ಸ್ಕಾನ್ ಆಕೆಯ ಉದರದಲ್ಲಿ ಪರಕೀಯ ವಸ್ತು ಇರುವುದನ್ನು ಬೆಟ್ಟುಮಾಡಿತ್ತು. ಮಹಿಳೆ ಕಳೆದ 35 ವರ್ಷಗಳಿಂದಲೂ ಎರಡು ಕೆ.ಜಿ.ಗೂ ಹೆಚ್ಚಿನ ತೂಕದ ಮತ್ತು ಏಳು ತಿಂಗಳು ಪ್ರಾಯದ ಆ ಮರಗಟ್ಟಿದ್ದ ಭ್ರೂಣವನ್ನು ಗರ್ಭಕೋಶದಲ್ಲಲ್ಲ…ತನ್ನ ಉದರದಲ್ಲಿ ಹೊತ್ತುಕೊಂಡಿದ್ದಳು.
1981ರಲ್ಲಿ ಆಕೆ ಗರ್ಭವತಿಯಾಗಿದ್ದಾಗಿನ ಆ ಭ್ರೂಣ ಅವಳಿಗೆ ಯಾವುದೇ ತೊಂದರೆಯನ್ನು ಕೊಟ್ಟಿರಲಿಲ್ಲ. ವೃದ್ಧೆ ಹಿಂದೆ ವಿಕಿರಣ ಚಿಕತ್ಸೆಗೊಳಗಾಗಿದ್ದಳು. ಆದರೂ ಆಕೆಯ ಉದರದಲ್ಲಿದ್ದ ಅಕ್ಷರಶಃ ಈಜಿಪ್ಟ್ನ ಪಿರಾಮಿಡ್ಗಳಲ್ಲಿಯ ‘ಮಮ್ಮಿ’ಯಂತಿದ್ದ ಭ್ರೂಣ ಪತ್ತೆಯಾಗಿರಲಿಲ್ಲ.
ವೈದ್ಯಕೀಯ ಲೋಕದ ಇತಿಹಾಸದಲ್ಲಿ ವಿಶ್ವಾದ್ಯಂತ ಇಂತಹ ಮರಗಟ್ಟಿದ ಭ್ರೂಣಗಳು ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ 300ನ್ನು ದಾಟಿಲ್ಲ. 1582ರಲ್ಲಿ 68 ರ ಹರೆಯದ ಮಹಿಳೆಯೋರ್ವಳು ಮೃತಪಟ್ಟಾಗ ತನ್ನ ಹೊಟ್ಟೆಯಲ್ಲಿ ಇಂತಹ ಅಚ್ಚರಿಯ ಮೊದಲ ಪ್ರಕರಣವನ್ನು ವೈದ್ಯಲೋಕದ ಮುಂದೆ ತೆರೆದಿಟ್ಟಿದ್ದಳು.

Comments are closed.