ಕರಾವಳಿ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ವೈಮಾನಿಕ ಸುರಕ್ಷತಾ ಸೇವೆ ಕಾರ್ಯಾರಂಭ

Pinterest LinkedIn Tumblr

mangalore-airport-1

ಮಂಗಳೂರು, ಅ.20: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ವೈಮಾನಿಕ ಸುರಕ್ಷತಾ ಸೇವೆಗೆ ಸಂಬಂಧಿಸಿ ಏರ್ ಟ್ರಾಫಿಕ್ ಕಂಟ್ರೋಲ್ ಸರ್ವಿಸ್ ಮತ್ತು ನಿಯಂತ್ರಣ ಗೋಪುರಕ್ಕಾಗಿ ನಿರ್ಮಿಸಲಾದ ನೂತನ ಕಟ್ಟಡ ಪ್ರಾಯೋಗಿಕ ವಾಗಿ ಕಾರ್ಯಾರಂಭಗೊಂಡಿದೆ. ನಿಯಂತ್ರಣ ಗೋಪುರ ಸಹಿತ ವಿಮಾನ ಯಾನ ನಿರ್ವಹಣಾ ಸೇವೆಗಳನ್ನು ತಾಂತ್ರಿಕ ಕಟ್ಟಡ ನಿರ್ಮಾಣದೊಂದಿಗೆ 20 ಕೋ. ರೂ. ವೆಚ್ಚದಲ್ಲಿ ಮಾಡಲಾಗಿದೆ.

ಈ ವ್ಯವ್ಗಸ್ಥೆಯಿಂದ ವಿಮಾನ ಹಾರಾಟದ ನಿಯಂತ್ರಣ ಹಾಗೂ ಸುರಕ್ಷತಾ ವ್ಯವಸ್ಥೆ ಇನ್ನಷ್ಟು ಬಲಶಾಲಿಯಾಗಲಿದೆ.ಹಳೆಯ ಕಟ್ಟಡದಲ್ಲಿದ್ದ ಉಪಕರಣಗಳನ್ನು ಪ್ರದೇಶ ನಿಯಂತ್ರಣ ಕೇಂದ್ರದಿಂದ ಸೇವೆ ಒದಗಿಸಲು ಹೊಸ ಕಟ್ಟಡಕ್ಕೆ ಹಂತಹಂತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ತಿಳಿಸಿದ್ದಾರೆ.

20 ಕೋ.ರೂ ವೆಚ್ಚದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಸರ್ವಿಸ್ ಹಾಗೂ ನಿಯಂತ್ರಣ ಗೋಪುರ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಅದರಂತೆ ಜನವರಿ 10ರಂದು ಹೊಸ ನಿಯಂತ್ರಣ ಗೋಪುರ ಕಾರ್ಯಾರಂಭಗೊಂಡಿತ್ತು. ಪ್ರಸಕ್ತ ಎಎನ್‌ಎಸ್ ಸಲಕರಣೆಗಳನ್ನು ಹೊಸ ತಾಂತ್ರಿಕ ಕಟ್ಟಡಕ್ಕೆ ವರ್ಗಾಯಿಸಿ ಪ್ರಾಯೋಗಿಕವಾಗಿ ಕಾರ್ಯಾರಂಭಿಸಲಾಗಿದೆ.

ಈ ನಿಯಂತ್ರಣ ಗೋಪುರ ಹಾಗೂ ಕಂಟ್ರೋಲ್ ಸರ್ವಿಸ್ ವಿಮಾನ ನಿಲ್ದಾಣ ವ್ಯಾಪ್ತಿಯ 250 ನಾಟಿಕಲ್ ಮೈಲು ದೂರದಲ್ಲಿ ಸುರಕ್ಷಿತ ವಾಯು ಸಂಚಾರಕ್ಕೆ ಸೂಚನೆ ನೀಡುವ ಸಾಮರ್ಥ್ಯ ಹೊಂದಿದೆ.ನೂತನ ವ್ಯವಸ್ಥೆ ಮಂಗಳೂರು ವಿಮಾನ ನಿಲ್ದಾಣದಿಂದ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳ ಬಗ್ಗೆ ನಿಗಾ ವಹಿಸಲು ಸಹಕಾರಿಯಾಗಲಿದೆ. ರಾಡಾರ್‌ ಚಿತ್ರಣ ಸಹಿತವಾಗಿ ಈ ಪರಿಸರದಲ್ಲಿ ಸಂಪೂರ್ಣ ಸುರಕ್ಷತಾ ವಿಮಾನ ಹಾರಾಟ ಸಾಧ್ಯವಾಗುತ್ತದೆ. ಈ ಏರ್ ಕಂಟ್ರೋಲ್ ಸೆಂಟರ್ 24 x 7 ಆಗಿ ಕಾರ್ಯನಿರ್ವಹಿಸಲಿದೆ.

ನೂತನ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಿಂದ ವಿಮಾನ ಹಾರಾಟದ ವ್ಯವಸ್ಥೆಯ ಸುರಕ್ಷತೆಯ ವ್ಯವಸ್ಥೆ ವೃದ್ಧಿಗೊಂಡಿದೆ. ಅನುಷ್ಠಾನದ ಸಂಪೂರ್ಣ ಕೆಲಸ ಕಾರ್ಯಗಳನ್ನು ಭಾರತೀಯ ವಿಮಾನ ಯಾನ ಪ್ರಾಧಿಕಾರ-ಸಿಎನ್‌ಎಸ್‌ ಎಂಜಿನಿಯರ್‌ಗಳೇ ನಿರ್ವಹಿಸಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

.

Comments are closed.