ಲಖನೌ: ಭಯೋತ್ಪಾದನೆಯನ್ನು ಪೋಷಿಸುವವರನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳನ್ನು ಜಗತ್ತು ಏಕಾಂಗಿಯಾಗಿಸಬೇಕು ಮತ್ತು ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಂದಾಗಬೇಕು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಬಲವಾದ ಸಂದೇಶ ರವಾನಿಸಿದ್ದಾರೆ.
ಯುದ್ಧ ನಮ್ಮ ಆಯ್ಕೆಯಲ್ಲ ಎಂದು ಅಭಿಪ್ರಾಯಪಟ್ಟ ಅವರು ನಮ್ಮದು ಬುದ್ಧನ ಮಾರ್ಗ ಎಂದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಸೇನೆಯು ‘ನಿರ್ದಿಷ್ಟ ದಾಳಿ’ ನಡೆಸಿದ ನಂತರ ಮೊದಲ ಬಾರಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮೋದಿ ಅವರು ನಿರ್ದಿಷ್ಟ ದಾಳಿಯ ಪ್ರಸ್ತಾಪವನ್ನೇ ಮಾಡಲಿಲ್ಲ.
ಐತಿಹಾಸಿಕ ಏಷಬಾಗ್ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ, ಭಯೋತ್ಪಾದನೆ ಬಗ್ಗೆ ಭಾರತ ಆರಂಭದಲ್ಲಿ ಮಾತನಾಡಿದಾಗ ಜಗತ್ತು ಅದರ ಕಡೆಗೆ ಗಮನ ಕೊಡಲಿಲ್ಲ. ಆದರೆ ಮುಂಬೈ ಮೇಲೆ ಉಗ್ರರ ದಾಳಿಯ ನಂತರ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಿತು ಎಂದು ಹೇಳಿದ್ದಾರೆ.
ಮುಂಬೈ ದಾಳಿಯ ನಂತರವೇ ಜಗತ್ತು ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿತು ಎಂಬುದಕ್ಕೆ ಅವರು ಒಂದು ನಿದರ್ಶನ ಕೊಟ್ಟರು. ‘ಒಮ್ಮೆ ಅಮೆರಿಕದ ಅಧಿಕಾರಿಯೊಬ್ಬರಿಗೆ ಭಯೋತ್ಪಾದನೆ ಬಗ್ಗೆ ಹೇಳಿದಾಗ, ಅದೊಂದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು’ ಎಂದು ಪ್ರಧಾನಿ ಹೇಳಿದ್ದಾರೆ.
ಭಯೋತ್ಪಾದನೆಯಿಂದ ಸಂತ್ರಸ್ತಳಾದ ಸಿರಿಯಾ ಬಾಲಕಿಯ ಚಿತ್ರವನ್ನು ಪ್ರಧಾನಿ ಉಲ್ಲೇಖಿಸಿದರು. ಭಯೋತ್ಪಾದನೆ ಎಂಬುದು ಮಾನವ ಕುಲದ ಶತ್ರು ಎಂಬುದನ್ನು ಪ್ರತಿಪಾದಿಸಲು ಈ ಚಿತ್ರವನ್ನು ಅವರು ಉದಾಹರಣೆಯಾಗಿ ನೀಡಿದರು.
ಭಯೋತ್ಪಾದನೆ ವಿರುದ್ಧ ಜಟಾಯುವಿನ ಹೋರಾಟ: ರಾಮಾಯಣ ಕತೆಯನ್ನು ಉಲ್ಲೇಖಿಸಿದ ಮೋದಿ, ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ರಾವಣನ ವಿರುದ್ಧ ಯುದ್ಧ ಮಾಡಿದ ಜಟಾಯು ಭಯೋತ್ಪಾದನೆ ವಿರುದ್ಧ ಮೊದಲ ಹೋರಾಟ ನಡೆಸಿತು. ಜಟಾಯುವಿನಿಂದ ನಾವು ಪಾಠ ಕಲಿಯಬೇಕಿದೆ ಎಂದು ಹೇಳಿದರು.
ಕೃಷ್ಣ, ಬುದ್ಧ, ಗಾಂಧಿಯ ನಾಡು ನಮ್ಮದು: ‘ಭಾರತ ಯುದ್ಧ ಬಯಸುತ್ತಿಲ್ಲ, ನಮಗೆ ಶಾಂತಿ ಬೇಕು ಎಂದು ಮೋದಿ ಪ್ರತಿಪಾದಿಸಿದರು. ಕೆಲವು ಸಂದರ್ಭಗಳಲ್ಲಿ ಯುದ್ಧ ಅನಿವಾರ್ಯವಾಗಿಬಿಡುತ್ತದೆ. ಶತ್ರುಗಳ ಸಂಹಾರಕ್ಕೆ ಕೃಷ್ಣ ಚಕ್ರವನ್ನು ಬಳಸಿದ. ಮಹಾತ್ಮ ಗಾಂಧಿ ಮತ್ತು ಬುದ್ಧ ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕರು. ಕೃಷ್ಣ, ಬುದ್ಧ ಮತ್ತು ಗಾಂಧಿಯ ನಾಡು ನಮ್ಮದು’ ಎಂದು ಪ್ರಧಾನಿ ಹೇಳಿದರು.
‘ಸುದರ್ಶನ ಚಕ್ರದ ಮೋಹನ ಮತ್ತು ಚರಕದ ಮೋಹನನ (ಮಹಾತ್ಮ ಗಾಂಧಿ) ನಡುವೆ ಸಮತೋಲನ ಕಂಡುಕೊಂಡವರು ನಾವು’ ಎಂದು ಪ್ರಧಾನಿ ವಿವರಿಸಿದರು.
Comments are closed.