ರಾಷ್ಟ್ರೀಯ

ಪಾಕಿಸ್ತಾನಿ ವಧುವನ್ನು ಮದುವೆಯಾಗಲಿರುವ ಭಾರತೀಯ ಯುವಕನಿಗೆ ಎದುರಾಗಿದೆ ಸಮಸ್ಯೆ !

Pinterest LinkedIn Tumblr

pak

ಜೋಧಪುರ: ಭಾರತ-ಪಾಕಿಸ್ತಾನ ನಡುವಿನ ಕದನ ಸ್ಥಿತಿಗೆ ಒಂದು ಮದುವೆ ಬ್ರೇಕ್ ಹಾಕಿದೆ. ಕರಾಚಿ ಮೂಲದ ವಧು ಪ್ರಿಯಾ ಹಾಗೂ ಭಾರತದ ರಾಜಸ್ಥಾನ ದ ಜೋದ್ಪುರ ಮೂಲದ ನರೇಶ್ ಮದುವೆ ನಿಶ್ಚಯಗೊಂಡು ಮೂರು ತಿಂಗಳಾಗಿದೆ.

ಇವರಿಬ್ಬರ ಮದುವೆ ನಿಶ್ಚಯಗೊಂಡು ತಿಂಗಳು ಕಳೆದರೂ ವೀಸಾ ಸಿಗುತ್ತಿಲ್ಲ. ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಕೊನೆಗೆ ಅವರು ಮೊರೆ ಹೋಗಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ.

ವಿದೇಶಾಂಗ ವ್ಯವಹಾರಗಳ ಯಾವುದೇ ವಿಚಾರದಲ್ಲಿ ಕಷ್ಟ ಎದುರಾದರೆ ಸುಷ್ಮಾ ಅವರಿಗೊಂದು ಟ್ವೀಟ್‌ ಮಾಡಿದರೆ ಸಾಕು ತಕ್ಷಣ ಆ ಸಮಸ್ಯೆಗೆ ಅವರು ಸ್ಪಂದಿಸುತ್ತಾರೆ. ಬಹುತೇಕ ಸಮಸ್ಯೆಗಳನ್ನು ಅವರು ಇತ್ಯರ್ಥಪಡಿಸಿದ್ದಾರೆ. ಈಗಲೂ ಅವರು ಸಮಸ್ಯೆ ಪರಿಹರಿಸುವ ಭರವಸೆ ಕೊಟ್ಟಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ. ಹಾಗಾಗಿ ಒಂದು ತಿಂಗಳಿಂದ ಎರಡು ರಾಷ್ಟ್ರಗಳ ನಡೆಯಬೇಕಾಗಿದ್ದ ಶುಭ ಸಮಾರಂಭಗಳಿಗೆ ಬ್ರೇಕ್‌ ಬಿದ್ದಿದೆ. ಇದಕ್ಕೆ ಕಾರಣ ಸಕಾಲದಲ್ಲಿ ದೊರೆಯದ ವೀಸಾ. ಪಾಕಿಸ್ತಾನಿ ವಧುವನ್ನು ಮದುವೆಯಾಗಲಿರುವ ಭಾರತೀಯ ಯುವಕ ಆತಂಕಗೊಂಡು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರ ಸಹಾಯ ಕೇಳಿದ್ದಾನೆ.

ಜೋಧಪುರ ನಿವಾಸಿ ನರೇಶ್‌ ತೆವಾನಿ ಮತ್ತು ಕರಾಚಿಯ ವಧು ಪ್ರಿಯಾ ಬಚ್ಚಾನಿಯವರ ಮದುವೆ ಒಂದು ತಿಂಗಳ ಹಿಂದೆಯೇ ನಿಕ್ಕಿಯಾಗಿತ್ತು. ವಧು ಭಾರತಕ್ಕೆ ಬರಬೇಕು ಎನ್ನುವ ಹೊತ್ತಿಗೆ ಉರಿ ಉಗ್ರರ ದಾಳಿ ನಡೆಯಿತು. ಹಾಗಾಗಿ ಪ್ರಿಯಾ ಮತ್ತವರ ಕುಟುಂಬದವರಿಗೆ ವಿಸಾ ದೊರೆಯಲಿಲ್ಲ. ಹೀಗಾಗಿ ಮದುವೆ ನಡೆಯುವುದೊ ಇಲ್ಲವೊ ಎಂಬ ಆತಂಕ ನರೇಶ್‌ ಕುಟುಂಬದ್ದು.

ಮೂರು ತಿಂಗಳ ಹಿಂದೆ ಅರ್ಜಿ:

”ಮೂರು ತಿಂಗಳ ಹಿಂದೆಯೆ ವಧು ಮತ್ತು ಅವರ ಕುಟುಂಬದವರಿಗೆ ಸೂಕ್ತ ದಾಖಲೆಗಳ ಸಮೇತ ವಿಸಾಗಾಗಿ ಅರ್ಜಿ ಸಲ್ಲಿಸಲಾಗಿದೆ, ಮದುವೆಗೆ ಕೇವಲ ಒಂದು ತಿಂಗಳು ಮಾತ್ರ ಸಮಯವಿದ್ದು ಇನ್ನೂ ವಧುವಿನ ಕಡೆ ಯಾರೊಬ್ಬರಿಗೂ ವಿಸಾ ದೊರತಿಲ್ಲ. ಹಾಗಾಗಿ ದಯವಿಟ್ಟು ಸಹಾಯ ಮಾಡಿ” ಎಂದು ನರೇಶ್‌ ಟ್ವೀಟರ್‌ ಮೂಲಕ ವಿದೇಶಾಂಗ ಸಚಿವೆ ಸುಷ್ಮಾರಲ್ಲಿ ನಿವೇದಿಸಿಕೊಂಡಿದ್ದಾನೆ.

ಟ್ವೀಟರ್‌ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸುಷ್ಮಾ ನರೇಶ್‌ ಮನವಿಗೆ ಸ್ಪಂದಿಸಿದ್ದು, ಕೂಡಲೇ ಪ್ರಿಯಾ ಮತ್ತು ಅವರ ಕುಟುಂಬಕ್ಕೆ ವಿಸಾ ನೀಡುವುದಾಗಿ ಭರವಸೆ ನೀಡಿದ್ದಾರೆ.

2001 ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ ನರೇಶ್‌ರ ತಂದೆ ಎರಡು ದೇಶಗಳಲ್ಲಿರುವ ಸಾಂಸ್ಕ್ರತಿಕ ಸಾಮ್ಯತೆಯನ್ನು ಮೆಚ್ಚಿ ತಮ್ಮ ಮಗನ ಮದುವೆಯನ್ನು ಪಾಕಿಸ್ತಾನಿ ವಧುವಿನೊಂದಿಗೆ ಮಾಡಬೇಕೆಂದು ಆಸೆ ಪಟ್ಟಿದ್ದರು. ಎರಡು ದೇಶಗಳ ರಾಜಕೀಯ ಹಗ್ಗ ಜಗ್ಗಾಟಕ್ಕೆ ಬಲಿಯಾಗಲಿದೆ ಎಂದು ಭಾವಿಸಿದ್ದ ನರೇಶರ ಪ್ರೇಮ ಪ್ರಕರಣ ಸಚಿವೆ ಸುಷ್ಮಾರ ಮಧ್ಯಪ್ರವೇಶದಿಂದ ಸುಖಾಂತ್ಯ ಕಾಣುವ ವಿಶ್ವಾಸ ಮೂಡಿದೆ.

Comments are closed.