ಕರಾವಳಿ

ಚಿಲ್ಲರೆ ವಿವಾದ : ಚಲಿಸುತ್ತಿದ್ದ ಬಸ್‌ನಿಂದ ನದಿಗೆ ಹಾರಿದ ಕಂಡೆಕ್ಟರ್ – ಮೃತದೇಹಕ್ಕಾಗಿ ತೀವ್ರ ಶೋಧ

Pinterest LinkedIn Tumblr

subramanya_condecter_1

ಮಂಗಳೂರು : ಚಲಿಸುತ್ತಿದ್ದ ಬಸ್ ನಿಂದ ಬಸ್ ಕಂಡೆಕ್ಟರ್ ಒಬ್ಬರು ಸುಬ್ರಮಣ್ಯ ಸಮೀಪದ ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ವಾಮಂಜೂರು – ಗುರುಪುರ ನಿವಾಸಿ, ಕಂಡೆಕ್ಟರ್ ದೇವದಾಸ್ ಶೆಟ್ಟಿ (42) ಎಂದು ಗುರುತಿಸಲಾಗಿದೆ.

ಬಸ್ಸಿನಲ್ಲಿ ಇವರ ಮತ್ತು ಮಹಿಳೆಯೊಬ್ಬರ ಮಧ್ಯೆ ಚಿಲ್ಲರೆ ವಿಚಾರಕ್ಕೆ ಸಂಬಂಧಿಸಿ ವಾಗ್ವಾದ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆಯವರೆಗೆ ತಲುಪಿತ್ತು. ಇದೇ ಕಾರಣಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

subramanya_condecter_2

ಘಟನೆ ವಿವರ :

ಸುಬ್ರಮಣ್ಯ ದಿಂದ ಮಂಗಳೂರಿಗೆ ಚಲಿಸುತ್ತಿದ್ದ ಸರಕಾರಿ ಬಸ್ಸಿನಲ್ಲಿ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದು, ಟಿಕೇಟ್‌ಗಾಗಿ ಕಂಡೆಕ್ಟರ್‌ಗೆ 500 ರೂ ಕೊಟ್ಟಿರುವುದಾಗಿ ತಿಳಿಸಿ, ಬಾಕಿ ಹಣಕ್ಕಾಗಿ ಒತ್ತಾಯಿಸಿದ್ದಾರೆ . ಆದರೆ ಇದನ್ನು ನಿರಾಕರಿಸಿರುವ ಕಂಡೆಕ್ಟರ್‌ ಮಹಿಳೆ ನೂರು ರೂ ಮಾತ್ರ ನೀಡಿರುವುದಾಗಿ ತಿಳಿಸಿದ್ದಾರೆ. ಈ ವಿಷಯದಲ್ಲಿ ಇಬ್ಬರ ನಡುವೆ ಚರ್ಚೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಕಡಬ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಬಳಿಕ ಹಿಂತಿರುಗಿ ಬಂದು ಮತ್ತೆ ಅದೇ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್ ಠಾಣೆಯಲ್ಲಿ ಯಾವ ರೀತಿಯ ಒಪ್ಪಂದ ನಡೆದಿದೆ ಅಥವಾ ಈ ಬಗ್ಗೆ ಪ್ರಕರಣ ದಾಖಲಾಗಿದೆಯಾ ಎಂಬ ಬಗ್ಗೆ ಯಾವದೇ ನಿರ್ದಿಷ್ಟ ಮಾಹಿತಿ ಲಭಿಸಿಲ್ಲ. ಆದರೆ ಬಸ್ ಚಲಿಸಲು ಆರಂಭವಾದಗ ಈ ಮಹಿಳೆ ಮತ್ತೆ ಕಂಡೆಕ್ಟರ್ ಜೊತೆ ವಾಗ್ವಾದ ಆರಂಭಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಕಂಡೆಕ್ಟರ್ ದೇವದಾಸ್ ಅವರು ಚಲಿಸುತ್ತಿದ್ದ ಬಸ್ಸಿನಿಂದ ಕುಮಾರಧಾರ ನದಿಗೆ ಹಾರಿದ್ದಾರೆ ಎನ್ನಲಾಗಿದೆ.

ಬಸ್ ಚಾಲಕ ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನದಿಗೆ ಹಾರಿರುವ ದೇವದಾಸ್ ಶೆಟ್ಟಿ ಕುಮಾರಧಾರ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಪ್ರಕರಣ ದಾಖಲಿಸಿರುವ ಸುಬ್ರಮಣ್ಯ ಪೊಲೀಸರು ಮೃತದೇಹದ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Comments are closed.