
ಬೆಂಗಳೂರು,ಸೆ.23-ಕಾವೇರಿ ಮತ್ತು ಮಹದಾಯಿ ನದಿ ನೀರಿನ ಹಂಚಿಕೆ ಸಮಸ್ಯೆ ಬಗೆಹರಿಸಲು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಮದ್ಯ ಪ್ರವೇಶಿಸುವಂತೆ ಆಗ್ರಹಿಸಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ನಾಡಿನ 50 ಕ್ಕೂ ಹೆಚ್ಚು ಮಠಾಧಿಪತಿಗಳು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಬಸವನಗುಡಿಯಲ್ಲಿರುವ ಮಠದ ಆವರಣದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭವಾಗಿದ್ದು ಸಂಜೆ 6 ಗಂಟೆಯ ತನಕ ಧರಣಿ ನಡೆಸಲು ಸ್ವಾಮೀಜಿಗಳು ನಿರ್ಧರಿಸಿದ್ದಾರೆ. ರಾಜ್ಯದ ವಿವಿದೆಡೆಯಿಂದ ಧರಣಿಯಲ್ಲಿ ಪಾಲ್ಗೊಂಡಿದ್ದ ಮಠಾಧೀಶರು ಜಲ ವಿವಾದವನ್ನೂ ಕೂಡಲೇ ಬಗೆಹರಿಸುವಂತೆ ಆಗ್ರಹಿಸಿದರು.
ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಪ್ರಧಾನಿ ಮಧ್ಯ ಪ್ರವೇಶಿಸಿದ ಅನೇಕ ಉದಾಹರಣೆಗಳು ಇವೆ.ಈಗಲೂ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಸಮಸ್ಯೆಯನ್ನು ಬಗೆಹರಿಸಬೇಕು ಅದನ್ನು ಬಿಟ್ಟು ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಮೌನವಾಗಿರುವುದು ಸರಿಯಲ್ಲ ಎಂದು ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ.ಇಂದು ನಡೆಯುವ ವಿಶೇಷ ಅಧಿವೇಶನದಲ್ಲಿಯೂ ಅದೇ ನಿಲುವು ತೆಳೆಯುವ ಮೂಲಕ ನಾಡಿನ ರೈತರು ಹಾಗು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಆದ್ಯತೆ ನೀಡಬೇಕು,ರೈತರ ಪರವಾಗಿ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಮಠಾಧೀಶರ ಬೆಂಬಲ ವ್ಯಕ್ತಪಡಿಸಿದ್ದಾರೆ.
ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಮಾತನಾಡಿ,ಕಾವೇರಿ ಹಾಗು ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಅಲ್ಲದೆ ಕಾವೇರಿ ನೀರು ನಿರ್ವಹಣಾ ಸಮಿತಿ ರಚಿಸಬೇಕೆನ್ನುವ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ಅದನ್ನು ಮುಂದಕ್ಕೆ ಹಾಕಬೇಕು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲು ರಾಜಕೀಯ ಮುಖಂಡರು,ಕಾನೂನು ತಜ್ಞರು, ಮಠಾಧೀಶರ ನಿಯೋಗ ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಧರಣಿಯಲ್ಲಿ ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಭಾಗವಹಿಸಿದ್ದರು.
Comments are closed.