ಕರ್ನಾಟಕ

ಕಾವೇರಿ ವಿವಾದ: ಕೇಂದ್ರ ಸರಕಾರದ ಮೌನ ವಿರೋಧಿಸಿ ಪ್ರತಿಭಟನೆ

Pinterest LinkedIn Tumblr
cong  councilars protest at b b m p  aganest b j p  & jayalalitha
cong 

ಬೆಂಗಳೂರು, ಸೆ. ೨೩- ಕಾವೇರಿ ಜಲ ವಿವಾದ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸದೆ ಮೌನ ವಹಿಸದಿರುವುದು ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರದ ಮೂವರು ಸಚಿವರುಗಳು ಪ್ರಧಾನಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡದ ವಿರುದ್ಧ ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಇಂದು ಪ್ರತಿಭಟನಾ ಪ್ರದರ್ಶನ ನಡೆಸಿದರು.

ಬಿಬಿಎಂಪಿ ಕೆಂಪೇಗೌಡ ಪೌರ ಸಭಾಂಗಣದ ಮುಂಭಾಗ ಮೇಯರ್ ಮಂಜುನಾಥ ರೆಡ್ಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು ಕಾವೇರಿ ವಿವಾದ ಬಗೆಹರಿಸಲು ಪ್ರಧಾನಿ ಅವರು ಕೂ‌ಡಲೇ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮೂವರು ಕೇಂದ್ರ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕಾವೇರಿ ವಿಷಯದಲ್ಲಿ ಬಿಜೆಪಿ ಪಕ್ಷ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮೇಯರ್ ಮಂಜುನಾಥ ರೆಡ್ಡಿ, ಸುಪ್ರೀಂ ಕೋರ್ಟ್ ರಾಜ್ಯಕ್ಕೆ ಮಾರಕವಾಗಿದೆ. ಈ ತೀರ್ಪನ್ನು ಪಾಲಿಸಿದಲ್ಲಿ ಕಾವೇರಿ ಜಲಾನಯನ ಪ್ರದೇಶದ ರೈತರು, ವಿಶೇಷವಾಗಿ ಬೆಂಗಳೂರು ನಗರದ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪ‌ಡಿಸಿದರು.

ಸುಪ್ರೀಂ ಕೋರ್ಟ್ ತಮಿಳುನಾಡು ಪರ ತೀರ್ಪು ನೀಡುವ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಕೈವಾಡವಿದೆ. ರಾಜ್ಯದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದ ಸರ್ವಪಕ್ಷಗಳ ಸಭೆಯಲ್ಲಿ ಬಿಜೆಪಿ ನಾಯಕರು ಬಹಿಷ್ಕಾರ ಹಾಕಿರುವುದು ಇದನ್ನು ಪುಷ್ಟಿಕರಿಸುತ್ತದೆ ಎಂದು ಆರೋಪಿಸಿದರು.

ಕಾವೇರಿ ವಿವಾದದಿಂದ ರಾಜ್ಯ ಹೊತ್ತಿ ಉರಿಯುತ್ತಿದ್ದರೂ ಬಿಜೆಪಿ ನಾಟಕವಾಡುತ್ತಿದೆ. ಇದು ಜನತೆಗೆ ಮಾಡಿದ ದ್ರೋಹ ಎಂದು ಆರೋಪಿಸಿದರು. ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ ಅವರು, ಕಾವೇರಿ ಮತ್ತು ಮಹಾದಾಯಿ ನೀರಿಗಾಗಿ ಕಾಂಗ್ರೆಸ್ ನೈಜ ಹೋರಾಟ ಮಾಡುತ್ತಿದ್ದರೆ ಬಿಜೆಪಿ ಮಿಶನ್ -150 ವಿಷಯದ ಪರವಾಗಿ ಹೋರಾಟ ಮಾಡುತ್ತಿದೆ ಎಂದು ಲೇವಡಿ ಮಾಡಿದರು. ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಗತ್ಯವಿಲ್ಲ. ಈಗಾಲಾದರೂ ಬಿಜೆಪಿ ಸಚಿವರು, ಸಂಸದರು ಹಾಗೂ ರಾಜ್ಯದ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬೇಕು ಹಾಗೂ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿಯವರಿಗೆ ಹೆಗಲುಕೊಟ್ಟ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅವರು ಅಭಿನಂದಿಸಿದರು.

ಪ್ರತಿಭಟನಾ ಪ್ರದರ್ಶನದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ್, ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ ರೆಡ್ಡಿ, ಗುಣಶೇಖರ್, ಪದ್ಮಾವತಿ, ಮೋಹನ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು.

Comments are closed.