ಕರ್ನಾಟಕ

ಕಾವೇರಿ ವಿಷಯವಾಗಿ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೇವೇಗೌಡರು ಹೇಳಿದ್ದೇನು…?

Pinterest LinkedIn Tumblr

2

ಬೆಂಗಳೂರು: ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಜೆಡಿಎಸ್‌ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಮುಖ್ಯಮಂತ್ರಿಗೆ ಸಲಹೆ ನೀಡಿದ ದೇವೇಗೌಡ ಅವರು, ‘ವಿಧಾನಸಭೆ ವಿಸರ್ಜಿಸುವುದಾಗಲಿ, ರಾಜೀನಾಮೆ ನೀಡುವುದಾಗಲಿ ಮಾಡಬೇಡಿ. ತಮಿಳುನಾಡಿಗೆ ನೀರು ಬಿಡದೇ ಇರುವ ಗಟ್ಟಿ ತೀರ್ಮಾನ ಕೈಗೊಳ್ಳಿ’ ಎಂದು ಸಲಹೆ ನೀಡಿದರು ಎಂದು ಗೊತ್ತಾಗಿದೆ. ಸಚಿವ ಎಚ್‌.ಸಿ. ಮಹಾದೇವಪ್ಪ ಅವರ ಜತೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಕಾವೇರಿ ಅಷ್ಟೇ ಅಲ್ಲ, ಇನ್ನೂ ಅನೇಕ ವಿಷಯಗಳ ಬಗ್ಗೆ ದೇವೇಗೌಡರೊಂದಿಗೆ ಚರ್ಚಿಸಿದ್ದೇನೆ. ಮುಖ್ಯವಾಗಿ ಕಾವೇರಿ ಬಿಕ್ಕಟ್ಟಿನ ಕುರಿತು ಅವರಿಂದ ಕೆಲವು ಸಲಹೆಗಳನ್ನು ಪಡೆದಿದ್ದೇನೆ’ ಎಂದಷ್ಟೇ ಹೇಳಿದರು.

ನಿರ್ವಹಣಾ ಮಂಡಳಿ ರಚಿಸುವ ಆದೇಶ ಪ್ರಧಾನಿ ತಿರಸ್ಕರಿಸಲಿ: ಬುಧವಾರ ಬೆಳಿಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ದೇವೇಗೌಡ ಅವರು, ಈಗ ಒಂದು ಲೋಟ ನೀರಿಗೂ ನಾವು ಅಮ್ಮನ (ಜಯಲಲಿತಾ) ಮುಂದೆ ಕೈಚಾಚುವ ಪರಿಸ್ಥಿತಿ ಬಂದಿದೆ ಎಂದು ದೇವೇಗೌಡರು ಹೇಳಿದರು.

ದಶಕದ ಬಳಿಕ ದೇವೇಗೌಡರ ಮನೆಗೆ ಹೋದ ಸಿದ್ದರಾಮಯ್ಯ
ಕಾವೇರಿ ವಿಷಯದಲ್ಲಿ ರಾಜ್ಯ ಕಷ್ಟಕ್ಕೆ ಈಡಾಗಿರುವ ಹೊತ್ತಿನಲ್ಲಿ ಹಳೆಯ ರಾಜಕೀಯ ದ್ವೇಷ ಬದಿಗಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ದಶಕದ ಬಳಿಕ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು.

ಕಾಂಗ್ರೆಸ್‌–ಜೆಡಿಎಸ್‌ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ದೇವೇಗೌಡರೊಂದಿಗೆ ಮುನಿಸಿಕೊಂಡು, 2006ರಲ್ಲಿ ಜೆಡಿಎಸ್‌ನಿಂದ ಹೊರಬಂದಿದ್ದರು. ನಂತರ ನಡೆದ ಚುನಾವಣೆಗಳಲ್ಲಿ ಇಬ್ಬರೂ ಹಾವು ಮುಂಗುಸಿ ತರಹ ವರ್ತಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಕಳೆದ ವರ್ಷ ಬಿಬಿಎಂಪಿಯಲ್ಲಿ ಕಾಂಗ್ರೆಸ್‌ಜೊತೆ ಜೆಡಿಎಸ್‌ಮೈತ್ರಿ ಮಾಡಿಕೊಳ್ಳಬೇಕಾದರೆ ಮುಖ್ಯಮಂತ್ರಿಗಳು ದೇವೇಗೌಡರನ್ನು ಭೇಟಿ ಮಾಡಲಿ ಎಂದು ಜೆಡಿಎಸ್‌ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪಟ್ಟು ಹಿಡಿದಿದ್ದರು. ಆಗಲೂ ಗೌಡರನ್ನು ಭೇಟಿ ಮಾಡದ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಅವರನ್ನು ಕಳುಹಿಸಿದ್ದರು. ಹಳೆ ಮೈಸೂರು ಭಾಗದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ದೇವೇಗೌಡರು ಸರ್ಕಾರದ ನಿಲುವನ್ನು ಬೆಂಬಲಿಸಿದರೆ ಪ್ರತಿಭಟನೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ. ಸರ್ವಪಕ್ಷ ಸಭೆಯನ್ನು ಬಿಜೆಪಿ ಬಹಿಷ್ಕರಿದ್ದು, ದೇವೇಗೌಡರ ಮನವೊಲಿಸಿ ಸಭೆಗೆ ಕರೆದುಕೊಂಡು ಬಂದರೆ ಕಾವೇರಿ ವಿಷಯದಲ್ಲಿ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದಂತಾಗುತ್ತದೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗಿದೆ.

ಮಾಜಿ ಶಿಷ್ಯನಿಗೆ ಬಜ್ಜಿ: ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಶಿಷ್ಯನನ್ನು ‘ಸಿದ್ರಾಮು’ ಎಂದೇ ಆತ್ಮೀಯವಾಗಿ ಮಾತನಾಡಿಸಿದ ಗೌಡರು, ಸಿದ್ದರಾಮಯ್ಯಗೆ ಇಷ್ಟ ಎಂದು ಮನೆಯಲ್ಲಿಯೇ ಬಾಳೆಕಾಯಿ ಬಜ್ಜಿ ಮತ್ತು ಶುಂಠಿ ಚಹ ಮಾಡಿಸಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ ಸಿದ್ದರಾಮಯ್ಯ ಸೇವಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

Comments are closed.