ಮಂಗಳೂರು: ಸಾಮಾನ್ಯವಾಗಿ ಮ್ಯಾನುವಲ್ ಟ್ರಾನ್ಸ್ಮಿಶನ್ ಇರುವ ಕಾರನ್ನು ಚಲಾಯಿಸುವ ಬಹುತೇಕರು ತಮ್ಮ ಎಡಗೈಯನ್ನು ಗೇರ್ ಲಿವರ್ ಮೇಲೆಯೇ ಇಡುತ್ತಾರೆ. ಇದು ಭಾರತೀಯರ ಅಭ್ಯಾಸ ಮಾತ್ರವಲ್ಲ, ಜಾಗತಿಕವಾಗಿ ಇದೇ ಚಾಲ್ತಿಯಲ್ಲಿದೆ. ಗೇರ್ ಲಿವರ್ ಮೇಲೆ ಕೈ ಇಟ್ಟರೆ ಏನಾಗುತ್ತದೆ? ಅದರಲ್ಲೇನು ವಿಶೇಷ ಎಂದುಕೊಂಡವರು ಅದರಿಂದಾಗುವ ಅಪಾಯದ ಬಗ್ಗೆ ತಿಳಿದಿಲ್ಲ. ಹೀಗೆ ಗೇರ್ ಲಿವರ್ ಮೇಲೆ ಒತ್ತಡ ಹಾಕದೆಯೇ ಕೈಯಿಟ್ಟರೂ ಸಹ ಅದು ಸವೆದು ಹೋಗುವ ಅಪಾಯವಿದೆ. ಹಾಗಿದ್ದರೆ ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು?
ಸಾಮಾನ್ಯ ಟ್ರಾನ್ಸ್ಮಿಶನ್ಗಳಲ್ಲೆಲ್ಲ ಶಿಫ್ಟರ್ ರೈಲ್ ಮೇಲೆಯೇ ಗೇರ್ ಲಿವರ್ ಇರುತ್ತವೆ ಮತ್ತು ವಾಹನ ಚಲಾಯಿಸುವಾಗ ಗೇರ್ಗಳು ಚಲಿಸುತ್ತವೆ. ಟ್ರಾನ್ಸ್ಮಿಶನ್ ಒಳಗಿನ ಶಿಫ್ಟ್ ಫೋರ್ಕ್ಗಳು ಒಂದು ಗೇರ್ನಿಂದ ಮತ್ತೊಂದು ಗೇರ್ ಕಡೆಗೆ ವರ್ಗಾವಣೆಗೆ ಅವಕಾಶ ಹುಡುಕುತ್ತಿರುತ್ತವೆ.
ನೀವು ನಿಮ್ಮ ಕೈಯನ್ನು ಗೇರ್ ಲಿವರ್ ಮೇಲಿಟ್ಟಾಗ ಬೀಳುವ ಒತ್ತಡವು ಶಿಫ್ಟರ್ ರೈಲನ್ನು ಕಳೆಗೆ ದೂಡುತ್ತದೆ ಮತ್ತು ಅದರಿಂದಾಗಿ ಬೀಳುವ ಒತ್ತಡದಿಂದ ಶಿಫ್ಟ್ ಫೋರ್ಕ್ ಸಿಂಕ್ರೊನೈಜರ್ಗಳ ಮೇಲೆ ಒತ್ತಡ ಹಾಕುತ್ತದೆ. ಸಿಂಕ್ರೊನೈಜರ್ಗಳ ಮೇಲೆ ಬೀಳುವ ಒತ್ತಡದಿಂದಾಗಿ ಅವುಗಳು ಗೇರ್ಗಳ ಜೊತೆಗೆ ಸಂಪರ್ಕಕ್ಕೆ ಬರುತ್ತವೆ.
ಗೇರ್ ಲಿವರ್ ಮೂಲಕ ಒತ್ತಡವನ್ನು ಹಾಕಿದಾಗ ಸಿಂಕ್ರೊನೈಜರ್ಗಳು ಚಾಲನೆಗೊಳ್ಳದೆಯೇ ಈ ಕಾಂಟಾಕ್ಟ್ ಆಗಬಹುದು. ಆಗ ಸಿಂಕ್ರೊನೈಜರ್ ಮತ್ತು ಗೇರ್ ಒಂದಕ್ಕೊಂದು ಉಜ್ಜಿಕೊಂಡು ಗೇರ್ ಟೀತ್ ಅವಧಿಗೆ ಮೊದಲೇ ಸವೆದು ಹೋಗುತ್ತದೆ. ಹೀಗೆ ನಿಧಾನವಾಗಿ ಗೇರ್ಗಳು ಫ್ರಿಕ್ಷನ್ ಕಳೆದುಕೊಂಡು ಜಾರಲು ಶುರುವಾಗುತ್ತವೆ. ಹೀಗಾಗಿ ಗೇರ್ ಬಾಕ್ಸ್ಗಳು ಗೇರ್ಗಳಿಂದ ಹೊರ ಬೀಳಬಹುದು ಮತ್ತು ಕೆಲವೊಮ್ಮೆ ಎಂಗೇಜ್ ಆಗದೆಯೂ ಇರಬಹುದು.
ಎರಡೂ ಕೈಗಳನ್ನು ಇಡಲು ಸೂಕ್ತ ಜಾಗವೆಂದರೆ ಸ್ಟೀರಿಂಗ್ ವೀಲ್ ಆಗಿದೆ. ಗಡಿಯಾರದ ಮುಳ್ಳುಗಳು 3 ಮತ್ತು 9 ಗಂಟೆಯಲ್ಲಿ ಇರುವ ಆಕಾರದಲ್ಲಿ ಕೈಗಳನ್ನು ಸ್ಟೀರಿಂಗ್ ಮೇಲೆ ಇಡಬೇಕು. ಆದರೆ ಒಂದು ಕೈಯಲ್ಲಿ ಕಾರನ್ನು ನಿಭಾಯಿಸಲು ಪ್ರಯತ್ನಿಸಬಾರದು. ಮುಂದಿನ ಬಾರಿ ಗೇರ್ ಲಿವರ್ ಮೇಲೆ ಕೈಯಿಡುವಾಗ ಅದರ ಆಯಸ್ಸನ್ನು ಕಡಿಮೆ ಮಾಡುತ್ತಿದ್ದೀರಿ ಎನ್ನುವುದನ್ನು ಮರೆಯಬೇಡಿ.
Comments are closed.