ಕರಾವಳಿ

ಹೋರಾಟಗಾರರ ಮೇಲೆ ರೌಡಿಶೀಟರ್‌‌ ಕೇಸ್ : ಎಂ.ಆರ್.ಪಿ.ಎಲ್‌ ಜೊತೆ ಕೈಜೋಡಿಸಿದ ಇನ್ಸ್‌ಪೆಕ್ಟರ್ ಆರೋಪ: ಅಮಾನತಿಗೆ ಆಗ್ರಹ

Pinterest LinkedIn Tumblr

jokatte_mrpl_protest_1

ಮಂಗಳೂರು: MRPL ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಸುತ್ತಮುತ್ತ ಉಂಟಾದ ಮಾಲಿನ್ಯದ ವಿರುದ್ಧ ಹೋರಾಟ ಮಾಡಿದ್ದ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಪ್ರಮುಖರ ಮೇಲಿನ ರೌಡಿಶೀಟರ್‌‌ ಕೇಸ್ ವಾಪಾಸ್ ಪಡೆಯಲು ಒತ್ತಾಯಿಸಿ ಜೋಕಟ್ಟೆ ಗ್ರಾಮಸ್ಥರು ಬೃಹತ್ ಮೌನ ಮೆರವಣಿಗೆ ಮೂಲಕ ಸುರತ್ಕಲ್ ಠಾಣೆ ಬಳಿ ತೆರಳಿ ಪ್ರತಿಭಟನೆ ನಡೆಸಿ ಇನ್ಸ್‌ಪೆಕ್ಟರ್ ಅಮಾನತಿಗೆ ಆಗ್ರಹಿಸಿದರು.

ವೃದ್ಧರು, ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕಪ್ಪು ಪಟ್ಟಿ ಧರಿಸಿ ಸುರತ್ಕಲ್ ರೈಲ್ವೆ ಬ್ರಿಡ್ಜ್ ಬಳಿಯಿಂದ ಸುರತ್ಕಲ್ ಠಾಣೆಗೆ ಮೆರವಣಿಗೆಯಲ್ಲಿ ಸಾಗಿದರು. ಆದರೆ ಮೆರವಣಿಗೆ ಸುರತ್ಕಲ್ ಜಂಕ್ಷನ್ ತಲುಪಿದಾಗ ಪೊಲೀಸರು ಮೆರವಣಿಗೆ ತಡೆದರು. ಇದರಿಂದ ಆಕ್ರೋಶಿತರಾದ ಪ್ರತಿಭಟನಾಕಾರರು ರಸ್ತೆ ಮಧ್ಯೆ ಧರಣಿ ಕುಳಿತರು.ಬಳಿಕ ಸುರತ್ಕಲ್ ಠಾಣಾಧಿಕಾರಿ ಚೆಲುವರಾಜು ಮತ್ತು ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವ ವಿರುದ್ಧ ಘೋಷಣೆ ಕೂಗಿದರು.

jokatte_mrpl_protest_2 jokatte_mrpl_protest_3 jokatte_mrpl_protest_4 jokatte_mrpl_protest_5

ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, MRPL ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಸುತ್ತಮುತ್ತ ಉಂಟಾದ ಮಾಲಿನ್ಯದ ವಿರುದ್ಧ ಹೋರಾಡಲು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ರಚಿಸಿಕೊಳ್ಳಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ನಡೆದ ಶಾಂತಿಯುತ ಹೋರಾಟದಿಂದಾಗಿ ರಾಜ್ಯಸರಕಾರ ಸಮಸ್ಯೆ ಪರಿಹಾರಕ್ಕಾಗಿ ಕ್ರಮಗಳನ್ನು ಸೂಚಿಸಿ ಆದೇಶವನ್ನು ಹೊರಡಿಸಿರುತ್ತದೆ. ಆ ಮೂಲಕ ನಾಗರಿಕ ಹೋರಾಟ ಸಮಿತಿ ನಡೆಸಿದ ಹೋರಾಟಕ್ಕೆ ಗೆಲುವು ಲಭಿಸಿರುತ್ತದೆ.

ಅಂದಿನ ಹೋರಾಟದ ಸಂದರ್ಭದಲ್ಲಿ ರಸ್ತೆ ತಡೆ, ಅನುಮತಿ ರಹಿತ ಪ್ರತಿಭಟನೆಗಳ ನೆಪಗಳನ್ನು ಮುಂದಿಟ್ಟು ಕೆಲವು ಪ್ರಕರಣಗಳು ಸುರತ್ಕಲ್ ಮತ್ತು ಪಣಂಬೂರು ಠಾಣೆಗಳಲ್ಲಿ ದಾಖಲಾಗಿದ್ದವು. ಅಂತಿಮವಾಗಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಸರಕಾರಿ ಆದೇಶ ಪ್ರಕಟವಾದ ನಂತರ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಹೋರಾಟದ ಸಂದರ್ಭ ಹೂಡಲಾಗಿದ್ದ ಪ್ರಕರಣಗಳನ್ನು ಕೈಬಿಡುವಂತೆ SEZ, MRPL ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಅದರಂತೆ SEZ ಕಂಪೆನಿಯು ತಾನು ದಾಖಲಿಸಿದ ಮೊಕದ್ದಮೆಗಳನ್ನು ಹಿಂಪಡೆಯಲು ಸಿದ್ಧವಿರುವುದಾಗಿ ಪೊಲೀಸ ಕಮೀಷನರ್ ಅವರಿಗೆ ಪತ್ರ ಬರೆದಿತ್ತು.

ಆದರೆ ಅಂದು ದಾಖಲಾದ ಅದೇ ಸುಳ್ಳು ಮೊಕದ್ದಮೆಗಳನ್ನು ಮುಂದಿಟ್ಟು ಸುರತ್ಕಲ್ ಠಾಣಾಧಿಕಾರಿ ಚೆಲುವರಾಜು ಹೋರಾಟ ಸಮಿತಿಯ ಸಂಚಾಲಕರು ನಿವೃತ್ತ ಅಧಿಕಾರಿಯೂ ಆಗಿರುವ ಬಿ.ಎಸ್. ಹುಸೈನ್, ಹೋರಾಟ ಸಮಿತಿಯ ಸಂಚಾಲಕರು ಸ್ಥಳೀಯ ಪಂಚಾಯತ್ ಸದಸ್ಯರೂ ಆದ ಅಬೂಬಕ್ಕರ್ ಬಾವ, ಮೊಯ್ದೀನ್ ಶೆರೀಫ್ ಹಾಗೂ ವಿಜಯಾನಂದ ರಾವ್ ಅವರ ಮೇಲೆ ರೌಡಿಶೀಟ್ ತೆರೆದಿರುತ್ತಾರೆ. ಸುರತ್ಕಲ್ ಠಾಣಾಧಿಕಾರಿ ಹೋರಾಟಗಾರರನ್ನು ರೌಡಿಗಳನ್ನಾಗಿ ರೌಡಿಗಳನ್ನು ಜನನಾಯಕರನ್ನಾಗಿ ಪರಿಗಣಿಸುತ್ತಾರೆ ಎಂದು ದೂರಿದರು.

ಕುಖ್ಯಾತ ಕ್ರಿಮಿನಲ್‌ಗಳು, ಮತೀಯ ಗೂಂಡಾಗಳ ಮೇಲೆ ಹಬ್ಬ, ಉತ್ಸವಗಳ ಸಂದರ್ಭದಲ್ಲಿ ಹೂಡಲಾಗುವ ಸದ್ವರ್ತನೆ ಮುಚ್ಚಳಿಕೆಯ ಪ್ರಕರಣ ದಾಖಲಿಸಿರುತ್ತಾರೆ. ಐವತ್ತು ಸಾವಿರ ಬಾಂಡ್, ಅಷ್ಟೇ ಮೌಲ್ಯದ ಆಸ್ತಿ ಹೊಂದಿರುವ ಜಾಮೀನುದಾರರನ್ನು ಒದಗಿಸುವಂತೆ ಸಮನ್ಸ್ ನೀಡಿರುತ್ತಾರೆ. ಮತ್ತು ನಿಮ್ಮಿಂದ ಊರಿನಲ್ಲಿ ಗಲಭೆ, ಹಿಂಸೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ನೋಟೀಸು ನೀಡಿ ಏಕವಚನದಲ್ಲಿ ನಿಂದಿಸಿರುತ್ತಾರೆ.

ಹಬ್ಬದ ದಿನಗಳ ಮುನ್ನೆಚ್ಚರಿಕೆಯಾಗಿ ಈ ಕಾನೂನು ಕ್ರಮ ಎನ್ನುತ್ತಲೇ MRPL ನಾಲ್ಕನೇ ಹಂತದ ಭೂಸ್ವಾಧೀನ ಸಂದರ್ಭ ನಿಮ್ಮಂತಹ ಕ್ರಿಮಿನಲ್‌ಗಳಿಂದ ಅದಕ್ಕೆ ತೊಂದರೆಯಾಗುತ್ತದೆ ಎಂದು ಆರೋಪಿಸಿದ ಅವರು, ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಸುರತ್ಕಲ್ ಠಾಣಾಧಿಕಾರಿಯ ಇಂತಹ ಕಾನೂನು ವಿರೋಧಿ, ಜನವಿರೋಧಿ ಧೋರಣೆಯನ್ನು ಕಟುವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಕಮಿಷನರಿಗೆ ಮನವಿ :

ಇದೇ ಸಂದರ್ಭದಲ್ಲಿ ಈ ರೀತಿ ಕಾಯ್ದೆ ವಿರೋಧಿಯಾಗಿ ನಡೆದುಕೊಂಡಿರುವ ಚೆಲುವರಾಜು ಅವರನ್ನು ತಕ್ಷಣ ಅಮಾನತುಗೊಳಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಹೋರಾಟ ಸಮಿತಿ ಪ್ರಮುಖರ ಮೇಲೆ ಹಾಕಲಾಗಿರುವ ರೌಡಿಶೀಟ್ ಪ್ರಕರಣವನ್ನು ವಾಪಾಸ್ ಪಡೆಯಬೇಕು ಎಂದು ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಪೊಲೀಸ್ ಕಮೀಷನರ್ ಅವರಿಗೆ ಮನವಿ ಸಲ್ಲಿಸಿದೆ. ಪಣಂಬೂರು ಉಪ ವಿಭಾಗದ ಎಸಿಪಿ ರಾಜೇಂದ್ರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್.ಹುಸೈನ್, ಅಬೂಬಕ್ಕರ್ ಬಾವ, ಮೊಯ್ದಿನ್ ಶೆರೀಫ್, ವಿಜಯಾನಂದ ರಾವ್, ತಾಪಂ ಸದಸ್ಯ ಬಿ.ಎಸ್. ಬಶೀರ್, ಗ್ರಾಪಂ ಉಪಾಧ್ಯಕ್ಷ ಸಂಶುದ್ದೀನ್, ಜನಪರ ಹೋರಾಟಗಾರರಾದ ವಿದ್ಯಾ ದಿನಕರ್, ನಟೇಶ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಶೇಖರ್ ಸಾಲ್ಯಾನ್, ಸಲೀಂ ಶ್ಯಾಡೋ, ಬಶೀರ್ ಕೃಷ್ಣಾಪುರ, ಶ್ರೀನಾಥ್, ಅಜ್ಮಾಲ್, ಶ್ರೀನಿವಾಸ್ ಹೊಸಬೆಟ್ಟು, ಬಿ.ಕೆ.ಇಮ್ತಿಯಾಜ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.