ಬಸವರಾಜ ಹವಾಲ್ದಾರ

ಮಂಡ್ಯ: ‘ನೂರಾರು ವರ್ಷಗಳಿಂದ ಇಲ್ಲಿದ್ದೇವೆ. ನಾನು ಹುಟ್ಟಿ ಬೆಳೆದಿದ್ದೇ ಇಲ್ಲಿ. ಆದ್ರೂ ನಮ್ಮನ್ನ ತಮಿಳುನಾಡಿನೋರು ಅಂತ ಯಾಕೆ ಅಂತಾರೆ. ಹುಟ್ಟಿದ್ದು ಇಲ್ಲೇ, ಸಾಯೋದು ಇಲ್ಲೇ’
ತಮಿಳುನಾಡಿನಲ್ಲಿ ಕನ್ನಡಿಗರೊಬ್ಬರ ಮೇಲೆ ಹಲ್ಲೆ ಮಾಡಿದ್ದಕ್ಕೆ ಪ್ರತೀಕಾರ ಎಂಬಂತೆ ಇತ್ತೀಚೆಗೆ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ತಮಿಳುನಾಡಿನವರು ಎಂಬ ಕಾರಣಕ್ಕೆ ತಮ್ಮ ಅಂಗಡಿ ಮೇಲೆ ದಾಳಿ ನಡೆಸಿದ್ದಕ್ಕೆ ಭಾವುಕರಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು ಜಮುನಾ.
‘ನಮ್ಮ ಹೋಟೆಲ್ಗೆ ಬರುವ ಎಲ್ಲರೂ ಚಿತ್ರಾನ್ನ, ದೋಸೆ ಚೆನ್ನಾಗಿ ಮಾಡುತ್ತೀರಿ ಎನ್ನುತ್ತಿದ್ದರು. ಕೆಲವರಂತೂ ಸದಾ ನಮ್ಮ ಹೋಟೆಲ್ಗೆ ಬರುತ್ತಾರೆ. ಅಣ್ಣ– ತಮ್ಮಂದಿರು ಇದ್ದಂಗೆ ಇದ್ದಾರೆ. ಆದರೂ, ಸೋಮವಾರ ಧ್ವಂಸ ಮಾಡಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.
‘ಯಜಮಾನರು ತೀರಿಕೊಂಡಿದ್ದಾರೆ. ಮಧುಮೇಹ ಇರುವುದರಿಂದ ಔಷಧಿ ತೆಗೆದುಕೊಳ್ಳಬೇಕು. ಎಲ್ಲದಕ್ಕೂ ಹೋಟೆಲ್ ಆಧಾರ. ಅದರ ಮೇಲೆಯೇ ದಾಳಿ ಮಾಡಿದ್ದಾರೆ. ನೀವೇ ಜೀವನಕ್ಕೆ ಏನಾದರೂ ಒಂದು ಆಧಾರ ಮಾಡಿಕೊಡಿ’ ಎಂದು ಬೇಡಿಕೊಂಡರು.
‘ಜೀವನ ಸಾಗಿಸಲು ಇದ್ದದ್ದೇ ಹೋಟೆಲ್. ಅದನ್ನೇ ಧ್ವಂಸ ಮಾಡಿದ್ದಾರೆ. ಜೀವನವನ್ನು ಮತ್ತೇ ಮೊದಲಿನಿಂದ ಕಟ್ಟಿಕೊಳ್ಳುವ ಹಾಗೆ ಆಗಿದೆ. ಕನ್ನಡ ಕಲಿತಿದ್ದೇವೆ. ಅವರೊಂದಿಗೆ ಸಹಬಾಳ್ವೆ ನಡೆಸುತ್ತಿದ್ದೇವೆ. ಮೂರನೇ ತಲೆಮಾರು ಕರ್ನಾಟಕದಲ್ಲಿದೆ. ಆದರೂ, ನಾವು ಈ ನೆಲದವರಲ್ಲವಾ’ ಎಂದು ಪ್ರಶ್ನಿಸಿದರು.
‘ಅಂಗಡಿಗಳ ಮೇಲೆ ದಾಳಿ ನಡೆಸಿ ರೇಷನ್ ಎಲ್ಲ ಎತ್ತಿ ಹೊರಗೆ ಬಿಸಾಕಿದರು. ಯಂತ್ರಗಳನ್ನು ಒಡೆದಿದ್ದಾರೆ. ₹ 10 ಲಕ್ಷದಷ್ಟು ನಷ್ಟವಾಗಿದೆ. ನಮಗೆ ಜೀವ ಭಯ ಉಂಟಾಗಿತ್ತು. ನಮ್ಮ ಮೇಲೂ ದಾಳಿಗೆ ಮುಂದಾಗಿದ್ದರು. ಅಕ್ಕ–ಪಕ್ಕದವರು ರಕ್ಷಿಸಿದರು. ರಕ್ಷಿಸಿದವರೂ ಕನ್ನಡಿಗರು ಎಂಬುದು ನಮಗಿರುವ ಸಮಾಧಾನ’ ಎನ್ನುತ್ತಾರೆ ನಂದೀಶ್.
‘ತಂದೆ ಕಾಲದಿಂದಲೂ ಅಂಗಡಿ ಇದೆ. ಹಿಂದೆ ಯಾವತ್ತೂ ಈ ತರಹ ಆಗಿರಲಿಲ್ಲ. ಯಾರು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಎಲ್ಲರೂ ನಮಗೆ ಪರಿಚಿತರೇ ಇದ್ದಾರೆ. ಕೆಲವು ಕಿಡಿಗೇಡಿಗಳು ಮಾಡಿದ್ದಾರೆ. ಹಾಗೆಂದು ಜತೆಗಿದ್ದವರನ್ನು ದೂರುವುದಕ್ಕೆ ಆಗುವುದಿಲ್ಲ’ ಎನ್ನುತ್ತಾರೆ ಅವರು.
‘ಅಂಗಡಿ ಮೇಲೆ ದಾಳಿ ಮಾಡಿದ್ದಕ್ಕೆ ಬೇಜಾರಾಗಿಲ್ಲ. ಇಲ್ಲಿಯೇ ಹುಟ್ಟಿ ಅವರೊಂದಿಗೆ ಬೆಳೆದ ನಮ್ಮನ್ನು ಇನ್ನೂ ತಮಿಳುನಾಡಿನವರು ಎನ್ನುವಂತೆ ನೋಡಿದ್ದು ಬೇಜಾರಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಗಲಾಟೆಯಾದ ದಿನದಿಂದ ನಮ್ಮ ಕಾಲೊನಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಮೊದಲ ದಿನವಂತೂ ಇಲ್ಲಿಗೆ ಬರಲಿಕ್ಕೆ ಯಾರಿಗೂ ಅವಕಾಶ ನೀಡಿರಲಿಲ್ಲ. ಮಂಡ್ಯಕ್ಕೆ ಬಂದು 50 ವರ್ಷಗಳ ಮೇಲಾಗಿದೆ. ಎಲ್ಲರೂ ನಮ್ಮವರೇ ಆಗಿದ್ದಾರೆ. ಯಾವುದೇ ತೊಂದರೆ ಆಗುವುದಿಲ್ಲ ಎಂದರೂ ಪೊಲೀಸರು ಭದ್ರತೆ ಮುಂದುವರಿಸಿದ್ದಾರೆ’ ಎನ್ನುತ್ತಾರೆ ಮಂಡ್ಯದಲ್ಲಿರುವ ತಮಿಳು ಕಾಲೊನಿಯ ಮುರುಗನ್.
‘ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಕಾಲೊನಿ ವತಿಯಿಂದ ಪ್ರತಿಭಟನಾ ಮೆರವಣಿಗೆ ಮಾಡಿದ್ದೇವೆ. ಇಲ್ಲಿಯ ಜನರ ಜೀವನದ ಪ್ರಶ್ನೆಯಾಗಿದೆ. ನೀರಿದ್ದರೆ ತಾನೇ ನಾವೂ ಇಲ್ಲಿ ಬದುಕಲು, ಕೆಲಸ ಸಿಗಲು ಸಾಧ್ಯ. ತಮಿಳುನಾಡು ನೀರು ಕೇಳುತ್ತಿರುವುದಕ್ಕೆ ನಮ್ಮದೂ ವಿರೋಧವಿದೆ’ ಎನ್ನುತ್ತಾರೆ.
Comments are closed.