
ಬೆಳಗಾವಿ: ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆ ಶಾಂತಿಯುತವಾಗಿ ಶುಕ್ರವಾರ ಸಂಪನ್ನಗೊಂಡಿತು.
ಗುರುವಾರ ಸಂಜೆ ಹುತಾತ್ಮ ಚೌಕದಲ್ಲಿ ಚಾಲನೆಗೊಂಡ ಮೆರವಣಿಗೆಯು ನಗರದ ಗಲ್ಲಿ, ಗಲ್ಲಿಗಳಿಗೂ ಮೆರುಗು ನೀಡಿತು. ಶುಕ್ರವಾರ ಸಂಜೆವರೆಗೂ ವಿಸರ್ಜನೆ ಕಾರ್ಯ ಮುಂದುವರಿದಿದ್ದು ವಿಶೇಷ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೆರವಣಿಯು ದೀರ್ಘ ಅವಧಿಯವರೆಗೂ ನಡೆದು ದಾಖಲೆಯೇ ಸೃಷ್ಟಿಯಾಯಿತು. ಸಹಸ್ರಾರು ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ತಮ್ಮ ಬಡಾವಣೆಯ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಸ್ಥಳೀಯರು ಟ್ರ್ಯಾಕ್ಟರ್, ತೆರೆದ ಲಾರಿ ಮೊದಲಾದ ವಾಹನಗಳಲ್ಲಿ ಡೋಲು, ಡಾಲ್ಬಿಯ ಸದ್ದಿಗೆ ನೃತ್ಯ ಮಾಡುತ್ತಾ ಸಂಭ್ರಮದಿಂದ ಮೆರವಣಿಗೆಯಲ್ಲಿ ತಂದು, ಹೊಂಡಗಳಲ್ಲಿ ವಿಸರ್ಜಿಸಿ ವಿದಾಯ ಹೇಳಿದರು.
ಯಾವುದೇ ಅಹಿತಕರ ಘಟನೆಗಳಿಲ್ಲದೆ ಬಹುತೇಕ ಶಾಂತಿಯುತವಾಗಿ ನಡೆದ ಮೆರವಣಿಗೆಯುದ್ದಕ್ಕೂ ‘ಗಣಪತಿ ಬಪ್ಪಾ ಮೋರಯಾ’ ಎನ್ನುವ ಘೋಷಣೆಗಳು ಮೊಳಗುತ್ತಿದ್ದರೆ, ಬಾಣಬಿರುಸುಗಳು ಆಗಸಕ್ಕೆ ರಂಗು ತುಂಬಿದವು. ಅಲ್ಲಲ್ಲಿ ಸಿಡಿಸುತ್ತಿದ್ದ ಪಟಾಕಿಗಳ ಸದ್ದಿನೊಂದಿಗೆ ಗಣೇಶ ಮಂಡಳಗಳ ಸಂಭ್ರಮವೂ ಮುಗಿಲುಮುಟ್ಟುತ್ತಿತ್ತು.
ಕೆಲವರು ಮನೆಗಳಲ್ಲಿ ಸ್ಥಾಪಿಸಿದ್ದ ಗಣೇಶ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ತಂದು ವಿಸರ್ಜಿಸಿದ್ದು ವಿಶೇಷವಾಗಿತ್ತು.
ವಿವಿಧ ಬಡಾವಣೆಗಳಿಂದ ಆಯಾ ಮಂಡಳಗಳು ಮೆರವಣಿಗೆಯಲ್ಲಿ ಕರೆತರುತ್ತಿದ್ದ ಗಣೇಶ ಮೂರ್ತಿಗಳನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಅದರಲ್ಲೂ ಸಂಭಾಜಿ ವೃತ್ತದಲ್ಲಿ ಸಾವಿರಾರು ಸಂಖ್ಯೆಯ ಜನರು ನೆರೆದಿದ್ದರು.
ಮಧ್ಯರಾತ್ರಿಯಲ್ಲಿ ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ ಜನಪದ ಕಲಾತಂಡಗಳು ಡೋಲು ಬಾರಿಸುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಮೈಕೊರೆಯುವ ಚಳಿಯ ನಡುವೆಯೂ ಮಕ್ಕಳು, ವೃದ್ಧರು ಎನ್ನದೆ ಕುಟುಂಬ ಸಮೇತವಾಗಿ ಬಂದು ವೈವಿಧ್ಯ ಗಣೇಶ ಮೂರ್ತಿಗಳ ಮೆರವಣಿಗೆಯನ್ನು ನೋಡಿ ಖುಷಿಪಟ್ಟರು.
ಜೋರಾಗಿ ನಡೆಯಿತು ಹರಾಜು!
ತಾವು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ಪಕ್ಕದಲ್ಲಿ ಪೂಜೆ, ಅಲಂಕಾರಕ್ಕಾಗಿ ಇಟ್ಟಿದ್ದ ವಸ್ತುಗಳನ್ನು, ಗಣೇಶ ಮೂರ್ತಿಗೆ ಹಾಕಿದ್ದ ಆಭರಣ ಮೊದಲಾದವುಗಳನ್ನು ಮೂರ್ತಿ ವಿಸರ್ಜನೆ ಮೆರವಣಿಗೆ ತೆರಳುವುದಕ್ಕೆ ಮುನ್ನ ಬಹುತೇಕ ಗಣೇಶ ಮಂಡಳಗಳು ಹರಾಜು ಹಾಕುತ್ತಿದ್ದುದು ಕಂಡುಬಂದಿತು.
ಗಣೇಶಮೂರ್ತಿಗೆ ಹಾಕಿದ್ದ ಚಿನ್ನ, ಬೆಳ್ಳಿಯ ಸರಗಳು, ಹೂಮಾಲೆಗಳು, ತೊಡಿಸಿದ್ದ ಬಟ್ಟೆ ಮೊದಲಾದವುಗಳನ್ನು ಹರಾಜು ಹಾಕಲಾಯಿತು. ಗಣೇಶನ ಪಕ್ಕ ಇರಿಸಿದ್ದ ತೆಂಗಿನಕಾಯಿ, ಹಣ್ಣಿಗೂ ಹತ್ತುಪಟ್ಟು ಬೆಲೆ ದೊರೆಯಿತು! ತೆಂಗಿನಕಾಯಿ ಕನಿಷ್ಠ 250ರಿಂದ ಗರಿಷ್ಠ ₨ 500ರವರೆಗೂ ಹರಾಜಾಯಿತು ! ಸ್ಥಳೀಯರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ, ವಸ್ತುಗಳನ್ನು ಖರೀದಿಸಿ ಸಂಭ್ರಮದೊಂದಿಗೆ ಪುನೀತಭಾವ ತಳೆದರು.
ಸಮಾದೇವಿ ಗಲ್ಲಿಯಲ್ಲಿ ಮಕ್ಕಳು ಹಾಗೂ ಮಹಿಳೆಯರೂ ಡೋಲುಗಳನ್ನು ಬಾರಿಸುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದುದು ವಿಶೇಷವಾಗಿತ್ತು. ಈ ರಸ್ತೆಯಲ್ಲಿ ಬಾಗಿ ಕುಟುಂಬದವರು ಹಾಗೂ ರಾಜಸ್ತಾನಿ ಸಂಘ ಮೊದಲಾದವರು ಸಾರ್ವಜನಿಕರಿಗೆ ಟೀ, ಪಾನೀಯ ಮೊದಲಾದ ವ್ಯವಸ್ಥೆ ಮಾಡಿದ್ದರು.
ಕಪಿಲೇಶ್ವರ ಹೊಂಡ, ಜಕ್ಕೇರಿ ಹೊಂಡ, ಕೋಟೆಕೆರೆ, ವಡಗಾವಿಯ ಕಲ್ಮೇಶ್ವರ ಕೆರೆ, ಆನಗೋಳದ ಲಕ್ಷ್ಮಿಕೆರೆ, ಮಜಗಾಂವ ಕೆರೆ ಮೊದಲಾದ ಕಡೆ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಕಪಿಲೇಶ್ವರ ಹೊಂಡದಲ್ಲಿ ದೊಡ್ಡ ದೊಡ್ಡ ಗಣೇಶ ಮೂರ್ತಿಗಳ ವಿಸರ್ಜನೆಗೆ ಆದ್ಯತೆ ನೀಡಲಾಯಿತು. ಸಣ್ಣ ಪ್ರಮಾಣದ ಮೂರ್ತಿಗಳನ್ನು ಆಯಾ ಮಂಡಳದವರೆ ವಿಸರ್ಜಿಸಿದರೆ, ದೊಡ್ಡ ಮೂರ್ತಿಗಳನ್ನು ಮಹಾನಗರಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದ ಕ್ರೇನ್‌ಗಳ ಮೂಲಕ ವಿಸರ್ಜಿಸಲಾಯಿತು.
ಮುಂಜಾಗ್ರತಾ ಕ್ರಮವಾಗಿ ನಗರಪೊಲೀಸ್ ಕಮಿಷನರ್ ಟಿ.ಜಿ. ಕೃಷ್ಣಭಟ್ ನೇತೃತ್ವದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹೊರಜಿಲ್ಲೆಗಳ ಪೊಲೀಸರನ್ನೂ ನಿಯೋಜಿಸಲಾಗಿತ್ತು.
Comments are closed.