ಕಾಸರಗೋಡು, ಸೆ.16: ಐದರ ಹರೆಯದ ಬಾಲೆಯ ಮೇಲೆ ಕಾಮುಕನೋರ್ವ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರವೆಸಗಿರುವ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಪೆರ್ಲದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೆಸ್ಸೆಸ್ ಕಾರ್ಯಕರ್ತ ಹಾಗೂ ಬಿಜೆಪಿ ಸ್ಥಳೀಯ ಮುಖಂಡ ಪೆರ್ಲ ನಿವಾಸಿ ಚಿದಾನಂದ ಆಚಾರ್ಯ(45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪೆರ್ಲದ ಅಯೋಧ್ಯ ಕಾಂಪ್ಲೆಕ್ಸ್ನಲ್ಲಿರುವ ಚಿನ್ನದ ಅಂಗಡಿಯೊಂದರ ಮಾಲಕನಾಗಿರುವ ಚಿದಾನಂದ ಪರಿಚಯದ ಮಹಿಳೆಯೊಬ್ಬರ ಐದು ವರ್ಷ ಪ್ರಾಯದ ಮಗುವಿನ ಮೇಲೆ ನಿರ್ದಯವಾಗಿ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಚಿದಾನಂದ ಮಗುವನ್ನು ಪುಸಲಾಯಿಸಿ ಕರೆದೊಯ್ದು ಕೆಲದಿನಗಳ ಹಿಂದೆ ಅತ್ಯಾಚಾರ ಎಸಗಿದ್ದ, ಘಟನೆಯ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು ದೇಹಸ್ಥಿತಿ ಹದಗೆಟ್ಟಿತ್ತೆನ್ನಲಾಗಿದೆ.
ಈ ಬಗ್ಗೆ ಮಗುವಿನ ತಾಯಿ ವಿಚಾರಿಸಿದಾಗ ಮಗು ತನ್ನ ಮೇಲೆ ನಡೆದಿದ್ದ ಪೈಶಾಚಿಕ ಕೃತ್ಯವನ್ನು ಬಾಯ್ಬಿಟ್ಟಿತ್ತು. ಕೂಡಲೇ ಹೆತ್ತವರು ಬದಿಯಡ್ಕ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ಬದಿಯಡ್ಕ ಠಾಣಾ ಪೊಲೀಸರು ನಿನ್ನೆ ಆತನ ಅಂಗಡಿಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿ ಸಂಘಟನೆ ಮತ್ತು ರಾಜಕೀಯ ಪಕ್ಷವೊಂದರ ಸಕ್ರಿಯ ಕಾರ್ಯಕರ್ತನಾಗಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸದಂತೆ ಭಾರೀ ಒತ್ತಡ ಕೂಡಾ ನಡೆದಿತ್ತು ಎನ್ನಲಾಗಿದೆ.ಆದರೆ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ಮತ್ತು ಅತ್ಯಾಚಾರ, ಬೆದರಿಕೆ ಪ್ರಕರಣ ದಾಖಲಾಗಿದೆ.

Comments are closed.