ಹುಬ್ಬಳ್ಳಿ/ಕಾರವಾರ/ಹೊಪೇಟೆ/ ಕೊಪ್ಪಳ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಗುರುವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈಲು ನಿಲ್ದಾಣಗಳಿಗೆ ಮುತ್ತಿಗೆ ಹಾಕಿ ರೈಲುತಡೆ ಮಾಡಲು ಮುಂದಾಗಿದ್ದವರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಹುಬ್ಬಳ್ಳಿಯಲ್ಲಿ 30 ಮಂದಿಯನ್ನು ಬಂಧಿಸಿದ್ದು, ಕಾರವಾರದಲ್ಲಿ ಪೊಲೀಸರನ್ನು ಕಂಡು ಪ್ರತಿಭಟನಾಕಾರರು ಹಿಂದಿರುಗಿದ್ದಾರೆ.
ಹುಬ್ಬಳ್ಳಿ ವರದಿ: ಕಾವೇರಿ ಹೋರಾಟ ಬೆಂಬಲಿಸಿ, ಮಹಾದಾಯಿ ನದಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಳಸಾ ಬಂಡೂರಿ ಹೋರಾಟ ಸಮಿತಿ ಮತ್ತು ಕನ್ನಡಪರ ಸಂಘಟನೆಯಿಂದ ಹುಬ್ಬಳ್ಳಿಯ ರೈಲುನಿಲ್ದಾಣಕ್ಕೆ ಮುತ್ತಿಗೆ ಯತ್ನಿಸಿತು. ಈ ವೇಳೆ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ.
ಹೊಸಪೇಟೆ ವರದಿ: ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಪ್ರತಿಭಟಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರೈಲುತಡೆ ಚಳವಳಿ ಹಿನ್ನೆಲೆಯಲ್ಲಿ ಹೊಸಪೇಟೆಯ ರೈಲುನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರೈಲುಗಳು ಎಂದಿನಂತೆ ಸಂಚರಿಸುತ್ತಿವೆ.
ಕಾರವಾರ ವರದಿ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಇಲ್ಲಿನ ಶಿರವಾಡ ನಿಲ್ದಾಣದಲ್ಲಿ ರೈಲು ತಡೆ ಮಾಡಲು ಬಂದಿದ್ದ ವಾಟಾಳ್ ಪಕ್ಷದ ಕಾರ್ಯಕರ್ತರು ಪೊಲೀಸರನ್ನು ಕಂಡು ಹೌಹಾರಿ, ಹಿಂದಿರುಗಿ ಹೋಗಿದ್ದಾರೆ.
ರೈಲು ತಡೆಗೆ ಯತ್ನ; ಕನ್ನಡಪರ ಸಂಘಟನೆ ಕಾರ್ಯಕರ್ತರ ಬಂಧನ
ಕೊಪ್ಪಳ: ಕಾವೇರಿ ವಿವಾದ ಸಂಬಂಧಿಸಿ ನಗರದಲ್ಲಿ ರೈಲು ತಡೆಗೆ ಸಿದ್ಧತೆ ನಡೆಸಿದ್ದ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ನಿಲ್ದಾಣದ ಮುಂಭಾಗದಲ್ಲಿ ತಡೆದು ಬಂಧಿಸಿದರು.
ನಗರದ ರೈಲು ನಿಲ್ದಾಣದ ದಾರಿಯಲ್ಲೇ ಪ್ರತಿಭಟನಕಾರರನ್ನು ಪೊಲೀಸರು ಅಡ್ಡಗಟ್ಟಿದರು. ಅಲ್ಲೇ ಕೆಲಕಾಲ ಘೋಷಣೆ ಕೂಗಿದ ಕರ್ನಾಟಕ ರಕ್ಷಣಾ ವೇದಿಕೆಯ ಯುವ ವಿಭಾಗದ ಕಾರ್ಯಕರ್ತರು ನಿಲ್ದಾಣದ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದರು. ತಕ್ಷಣವೇ ಅವರನ್ನು ಬಂಧಿಸಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದರು.
ನಿಲ್ದಾಣದ ಸುತ್ತ ಪೊಲೀಸ್ ಹಾಗೂ ಗೃಹರಕ್ಷಕದಳದ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
Comments are closed.