ಅಂತರಾಷ್ಟ್ರೀಯ

ತಾನು ಗರ್ಭಿಣಿ ಎಂದು ತಿಳಿಯದೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ವಿಚಿತ್ರ ಮಹಾತಾಯಿ

Pinterest LinkedIn Tumblr

child_in_womb

ನ್ಯೂಯಾರ್ಕ್, ಸೆ.15: ಐಸಿಸ್ ಉಗ್ರ ಸಂಘಟನೆ ವಿರುದ್ಧದ ಹೋರಾಟದ ಭಾಗವಾಗಿರುವ ಅಮರಿಕಾ ಯುದ್ಧನೌಕೆ ಯುಎಸ್‌ಎಸ್ ಡ್ವೈಟ್ ಡಿ. ಈಸೆನ್ ಹೌವರ್ ನಲ್ಲಿ ಸೇವೆಯಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಹೊಟ್ಟೆ ನೋವೆಂದು ಅಲ್ಲಿನ ವೈದ್ಯರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಏಳು ಪೌಂಡ್ ತೂಕದ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.

ಮಗು ಹುಟ್ಟಿದ ದಿನ ಸೆಪ್ಟೆಂಬರ್ 11, ಸ್ಥಳ ಪರ್ಶಿಯನ್ ಗಲ್ಫ್ ಸಾಗರದ ಮಧ್ಯದಲ್ಲಿ. ಇಲ್ಲಿ ಆಶ್ಚರ್ಯದ ವಿಚಾರವೆಂದರೆ ಆ ಮಹಿಳೆ ಗರ್ಭಿಣಿಯೆಂಬ ವಿಚಾರ ಆಕೆಯ ಸಹೋದ್ಯೋಗಿಗಳಿಗೇ ತಿಳಿದಿರಲಿಲ್ಲ. ಅಷ್ಟೇ ಏಕೆ ಆ ಮಹಿಳೆ ಕೂಡ ತಾನು ಗರ್ಭ ಧರಿಸಿದ್ದೇನೆಂದು ತನಗೇ ತಿಳಿದಿರಲಿಲ್ಲವೆಂದು ಹೇಳಿಕೊಂಡಿದ್ದಾಳೆ.

ನೌಕಾ ಪಡೆಯ ನಿಯಮಗಳಂತೆ ಮಹಿಳೆಯೊಬ್ಬಳು ಗರ್ಭ ಧರಿಸಿದ್ದಾಳೆಂದು ಆಕೆಯ ವೈದ್ಯರು ದೃಢಪಡಿಸಿದ ಎರಡೇ ವಾರಗಳಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಆಕೆ ತಿಳಿಸಬೇಕಾಗಿದೆ.

ಮೇಲಾಗಿ ಗರ್ಭಿಣಿ ಉದ್ಯೋಗಿಯೊಬ್ಬಳು ತನ್ನ ಗರ್ಭಾವಸ್ಥೆಯ 20 ವಾರಗಳ ತನಕ ಸೇವೆ ಸಲ್ಲಿಸಬಹುದಾಗಿದೆ ಹಾಗೂ ಗರ್ಭಿಣಿ ಎಂದು ತಿಳಿದಾಕ್ಷಣ ಉದ್ಯೋಗಿಗಳನ್ನು ಆದಷ್ಟು ಬೇಗ ಸಮುದ್ರದಿಂದಾಚೆ ಕಳುಹಿಸಲಾಗುತ್ತದೆ.

ಮಗುವಿಗೆ ಜನ್ಮ ನೀಡಿದ ಮಹಿಳೆಯ ವಿವರಗಳನ್ನು ನೌಕಾ ಪಡೆ ಬಹಿರಂಗಗೊಳಿಸದೇ ಇದ್ದರೂ ಆಕೆ ಕ್ಯಾರಿಯರ್ ಏರ್ ವಿಂಗ್ ಮೂರರಲ್ಲಿ ಸ್ಕ್ವಾಡ್ರನ್ ಹುದ್ದೆಯಲ್ಲಿದ್ದಳು ಎಂದು ಹೇಳಲಾಗಿದೆ.

ಯುದ್ಧ ವಿಮಾನವನ್ನು ಹೊತ್ತ ಈ ನೌಕೆ 5,000ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ವರ್ಜೀನಿಯಾದ ನೋರ್ ಫೋಲ್ಕ್ ನಿಂದ ಜೂನ್ 1ರಂದು ಹೊರಟಿತ್ತು. ಈ ಮಹಿಳೆ ಮಗುವಿಗೆ ಜನ್ಮ ನೀಡುತಿದ್ದಂತೆಯೇ ನವಜಾತ ಶಿಶುವಿಗೆ ಅಗತ್ಯ ಸಾಮಗ್ರಿಗಳಾದ ಬೇಬಿ ಫುಡ್, ಡಯಾಪರ್ ಹಾಗೂ ಇನ್ ಕ್ಯುಬೇಟರನ್ನು ಅಲ್ಲಿಗೆ ಕಳುಹಿಸಲಾಯಿತು.

ಈ ಹಿಂದೊಮ್ಮೆ ಮೇ 2003ರಲ್ಲಿ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯೊಬ್ಬಳು ಯುಎಸ್‌ಎಸ್ ಬಾಕ್ಸರ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ ತಾನು ಗರ್ಭಿಣಿಯೆಂದೇ ತಿಳಿಯದ ನೌಕಾ ಸಿಬ್ಬಂದಿ ಸಾಗರ ಮಧ್ಯದಲ್ಲಿ ನೌಕೆಯಲ್ಲೇ ಮಗುವಿಗೆ ಜನ್ಮ ನೀಡಿದ ಮೊದಲ ಪ್ರಸಂಗ ಇದಾಗಿರಬಹುದು.

Comments are closed.