ಭೋಪಾಲ್, ಸೆ. 14 : ಈ ಮಕ್ಕಳು ತಮಗೆ ಸಿಕ್ಕಿದ ಹಣವನ್ನು ಸಿನಿಮಾ ನೋಡಲು, ಬರ್ಗರ್ ಅಥವಾ ಐಸ್ಕ್ರೀಂ ಸವಿಯಲು ಬಳಸಬಹುದಿತ್ತು. ಆದರೆ ಮೆಮೂನಾ ಖಾನ್(16) ಹಾಗೂ ಅಮೀರ್ ಖಾನ್ (14) ಎಂಬ ಅಕ್ಕ- ತಮ್ಮ ಕೈಗೆ ಸಿಕ್ಕಿದ ಪೈಸೆ ಪೈಸೆಯನ್ನೂ ಕೂಡಿಟ್ಟು ತಾವು ಕಲಿಯುವ ಶಾಲೆಗೆ ದೊಡ್ಡ ಉಡುಗೊರೆ ನೀಡಲು ನಿರ್ಧರಿಸಿದರು. ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಶಾಲೆಗೆ ಈ ಮಕ್ಕಳು ನೀಡಿದ ಅಚ್ಚರಿಯ ಉಡುಗೊರೆ ಏನು ಗೊತ್ತೇ? ಶಾಲೆಗೆ ಶೌಚಾಲಯ ನಿರ್ಮಿಸಿಕೊಟ್ಟದ್ದು.
11ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೆಮೂನಾ ಹಾಗೂ 10ನೆ ತರಗತಿ ವಿದ್ಯಾರ್ಥಿ ಅಮೀರ್ ತಮಗೆ ದೊರಕುವ ಅಲ್ಪಸಂಖ್ಯಾತರ ಸ್ಕಾಲರ್ಶಿಪ್ ಹಣವನ್ನು ಒಟ್ಟುಗೂಡಿಸಿದರು. ಇದಕ್ಕೆ ಎರಡು ಸಾವಿರ ರೂಪಾಯಿಯನ್ನು ಸೇರಿಸಿ, ಮಹಾರಾಣಿ ಲಕ್ಷ್ಮೀಬಾಯಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿಕೊಟ್ಟರು.
“ಶಾಲೆಯಲ್ಲಿ ಒಂದು ಶೌಚಾಲಯ ಮಾತ್ರ ಇತ್ತು. ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಿದ್ದುದು ನೋಡಿದಾಗ ಬೇಸರವಾಗುತ್ತಿತ್ತು. ಆದ್ದರಿಂದ ನಾವು ಸ್ಕಾಲರ್ಶಿಪ್ ಬಂದ ಹಣಕ್ಕೆ ಎರಡು ಸಾವಿರ ರೂಪಾಯಿ ಸೇರಿಸಿ, 10 ಸಾವಿರ ರೂಪಾಯಿ ಮಾಡಿದೆವು. ನಮ್ಮ ಉತ್ಸಾಹ ಕಂಡು ತಂದೆ 14,500 ರೂಪಾಯಿ ಹಾಕಿ ಶೌಚಾಲಯ ನಿರ್ಮಿಸಲು ನೆರವಾದರು”
ನಿರ್ದಿಷ್ಟ ಕಾರಣಗಳಿಗೆ ಕೊಡುಗೆ ನೀಡುವ ಅಭ್ಯಾಸ ಮೆಮೂನಾಗೆ ಸಹಜವಾಗಿಯೇ ಬಂದಿದೆ. 2011ರಲ್ಲಿ ಈಕೆ ಮುಖ್ಯಮಂತ್ರಿ ಶಿವವರಾಜ್ ಸಿಂಗ್ ಅವರಿಗೆ ಮಾಮಾಜಿ ಎಂದು ಸಂಬೋಧಿಸಿ ಪತ್ರ ಬರೆದು, ಶಾಲೆಗೆ ರಸ್ತೆ ನಿರ್ಮಿಸಿಕೊಡಲು ಮನವಿ ಮಾಡಿದ್ದಳು. ಇದಕ್ಕೆ ಸ್ಪಂದಿಸಿದ ಸಿಎಂ ಅನುದಾನ ಮಂಜೂರು ಮಾಡಿ, “ಬಾಂಜಿಯಾನ್ ಕಿ ಬಾತ್ ಕೈಸೆ ತಾಲ್ ಸಕ್ತಾ ಹೂನ್” ಎಂದು ಪ್ರತಿಕ್ರಿಯಿಸಿದ್ದರು.

Comments are closed.