
ಬೆಂಗಳೂರು, ಸೆ. ೧೩- ಕಾವೇರಿ ಮಕ್ಕಳ ನಾಡಿನಲ್ಲಿ ಧಾವಂತದ ಸ್ಥಿತಿ; ಬೀದಿ ಕಾಳಗಕ್ಕೆ ತಿರುಗಿದ್ದ ವಾತಾವರಣ ಈಗ ಸ್ವಲ್ಪಮಟ್ಟಿಗೆ ತಿಳಿಯಾದಂತೆ ಕಂಡರೂ ಭೀತಿ ಈಗಲೂ ಮನೆ ಮಾಡಿದೆ.
ಬೆಂಗಳೂರು ನಗರದಲ್ಲಿ ಬಿಗುವಿನ ವಾತಾವರಣ. ಎಲ್ಲಿ ನೋಡಿದರೂ ಶಸ್ತ್ರಧಾರಿ ಪೊಲೀಸರು. ರಸ್ತೆಗಳು ಖಾಲಿ ಖಾಲಿ. ಅಂಗಡಿ ಮುಂಗಟ್ಟುಗಳು ಬಂದ್. ಬಕ್ರಿದ್ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ. ಹೀಗಾಗಿ ಚಟುವಟಿಕೆ ಕಡಿಮೆ.
ಬೆಂಗಳೂರು-ಮೈಸೂರು ರಸ್ತೆಯಲ್ಲಿ ದೇಶದ ಗಡಿ ಭಾಗದ ಸ್ಥಿತಿಯ ಅನುಭವ. ಕಾವೇರಿ ನೀರು ಈ ಪ್ರದೇಶಕ್ಕೆ ಆಸರೆ. ಕೆಂಗೇರಿಯಿಂದ ಆರಂಭವಾಗಿ ಶ್ರೀರಂಗಪಟ್ಟಣದವರೆಗೆ ನಡುಕ ಹುಟ್ಟಿಸುವ ಸ್ಥಿತಿ. ಯಾಕೆಂದರೆ ಕಾವೇರಿ ಮಕ್ಕಳು ಬೀದಿಗೆ ಬಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಸ್ಥಿತಿ.
ಬೆಂಗಳೂರಿನ 12 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನಜೀವನ ಸ್ತಬ್ಧ. ಪೊಲೀಸ್ ವಾಹನಗಳ ಸಂಚಾರದ ಭರಾಟೆ ಬಿಟ್ಟರೆ ಉಳಿದಂತೆ ಚಟುವಟಿಕೆ ವಿರಳ. ಅಗತ್ಯ ವಸ್ತುಗಳಿಗೆ ಜನರ ಪರದಾಟ. ಬೆಂಗಳೂರಿನ ಪಶ್ಚಿಮ ವಲಯ ಹಾಗೂ ಉತ್ತರ ವಲಯದಲ್ಲಿ ಘರ್ಷಣೆಯ ವಾತಾವರಣ. ಉಳಿದಂತೆ ದಕ್ಷಿಣ ಹಾಗೂ ಪೂರ್ವ ಪ್ರದೇಶದಲ್ಲಿ ಮಾಮೂಲು ಸ್ಥಿತಿ. ಆದರೆ ಧಾವಾಂತದ ನೆರಳು ಎಲ್ಲೆಡೆ ಹಬ್ಬಿದೆ.
ನಗರದಲ್ಲಿ ನಿನ್ನೆ ಹಿಂಸಾಚಾರಕ್ಕೆ ತಿರುಗಿದ್ದ ಕಾವೇರಿ ಪ್ರತಿಭಟನೆಯು ಇಂದು ಶಾಂತವಾಗಿದ್ದರೂ ಬಸ್ ಸಂಚಾರ, ವಾಹನ ಸಂಚಾರ ಬಹುತೇಕ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡು ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಹಿಂಸಾಚಾರ ಪೀಡಿತ ನಗರದ 16 ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರೆದಿದ್ದು ಬಕ್ರಿದ್ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಬೆಳಿಗ್ಗೆ ಸಡಿಸಲಾಗಿದ್ದ ನಿಷೇಧಾಜ್ಞೆ ಮುಂದುವರೆಸಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಲ್ಲಿ ಅರೆಸೇನಾ ಪಡೆಯ ಯೋಧರು ಪಥಸಂಚಲನ ನಡೆಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ನಿವಾರಣೆಯಾಗತೊಡಗಿದೆ. ನಿನ್ನೆ ರಾತ್ರಿಯಿಂದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿಯಾಗಿರುವ ಕರ್ಫ್ಯೂವನ್ನು ಪರಿಸ್ಥಿತಿ ನೋಡಿಕೊಂಡು ಸಡಿಲಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ನಗರದ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿಯಿಂದ ಜಾರಿಯಲ್ಲಿರುವ ನಿಷೇಧಾಜ್ಞೆ ನಾಳೆಯವರೆಗೆ ಮುಂದುವರೆಯಲಿದೆ. ನಗರದಿಂದ ಹೊರ ಹೋಗುವ, ಒಳಬರುವ ಕೆಎಸ್ಆರ್ಟಿಸಿ ಬಸ್ ಸಂಚಾರದಲ್ಲಿ ಶೇ.80ರಷ್ಟು ಕಡಿಮೆಯಾಗಿದೆ. ಬಿಎಂಟಿಸಿ ಬಸ್ ಸಂಚಾರ ಕೂಡ ಅಲ್ಲೊಂದು ಇಲ್ಲೊಂದು ಎನ್ನುವಂತಿದೆ.
ಗಲಭೆ ಪೀಡಿತ ಹೆಗ್ಗನಹಳ್ಳಿ, ಲಗ್ಗೆರೆ, ಬ್ಯಾಟರಾಯನಪುರ, ನಾಯಂಡಹಳ್ಳಿ ಇನ್ನಿತರ ಕಡೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಲ್ಲದೇ ಆ ಪ್ರದೇಶಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು ಜನ ಸಂಚಾರ ತೀರಾ ಕಡಿಮೆಯಾಗಿದೆ.
ಉಳಿದಂತೆ ನಗರದ ಬಹುತೇಕ ಕಡೆಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿದ್ದು, ಮಾರುಕಟ್ಟೆ ಪ್ರದೇಶಗಳು ಬಿಕೋ ಎನ್ನ ತೊಡಗಿವೆ. ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ನೀರವ ಮೌನದ ಪರಿಸ್ಥಿತಿ ನಿರ್ಮಾಣವಾಗಿದೆ. ಮೆಟ್ರೋ ರೈಲು ಸಂಚಾರ ಕೂಡ ಸ್ಥಗಿತಗೊಂಡಿದ್ದು, ಜನ ಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾನಗೊಂಡಿದೆ.
ಚಿತ್ರ ಪ್ರದರ್ಶನ ಇಲ್ಲ
ನಿನ್ನೆ ಸಂಜೆಯಿಂದಲೇ ಸ್ಥಗಿತಗೊಂಡಿದ್ದ ಚಿತ್ರ ಪ್ರದರ್ಶನ ಮತ್ತೆ ಪುನರಾರಂಭಿಸುವ ಗೋಜಿಗೆ ಹೋಗಲಿಲ್ಲ. ಬಹುತೇಕ ಕಡೆ ಅಗತ್ಯ ವಸ್ತುಗಳ ಮಾರಾಟ ಮಳಿಗೆ ಹೊರತಾಗಿ ಉಳಿದ ಮಳಿಗೆಗಳು ಬಂದ್ ಆಗಿದ್ದು ಮಾಲ್ಗಳು, ಮಲ್ಟಿಫ್ಲೆಕ್ಸ್ಗಳ ಬಾಗಿಲಿಗೆ ಬೀಗ ಹಾಕಲಾಗಿದೆ
ರೋಗಿ ಪರದಾಟ
ಮೆಜೆಸ್ಟಿಕ್ನಲ್ಲಿ ಬಸ್ ಇಲ್ಲದೆ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಪರದಾಡುವಂತಾಯಿತು. ಬೆಳಗ್ಗೆಯಿಂದ ಬಸ್ ಸೌಲಭ್ಯ ಇರಲಿಲ್ಲ. ಕೆಎಸ್ಆರ್ಟಿಸಿ ಬಸ್ಗಳು ಬೆರಳೆಣಿಕೆಯಷ್ಟು ಸಂಚರಿಸಿದವು. ಅದರಲ್ಲಿ ಆಗಮಿಸಿದವರು ತಾವು ತಲುಪಬೇಕಾದ ಸ್ಥಳಕ್ಕೆ ತೆರಳಲು ಪರದಾಡುತ್ತಿದ್ದಾರೆ.
ಬಿಎಂಟಿಸಿ ಬಸ್, ಆಟೊ, ಟ್ಯಾಕ್ಸಿ ಸಂಚಾರ ವಿರಳವಾಗಿದ್ದು, ಜನರ ಪರದಾಟ ಹೆಚ್ಚಲು ಕಾರಣವಾಗಿದೆ. ನಾಳೆ ನಗರದಲ್ಲಿ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ರಾಯಚೂರಿನಿಂದ ಆಗಮಿಸಿದ್ದ ರೋಗಿ ಇಂದು ಆಸ್ಪತ್ರೆಗೆ ದಾಖಲಾಗಬೇಕಿತ್ತು. ಅನಿವಾರ್ಯ ಸ್ಥಿತಿಯಲ್ಲಿ ನಗರಕ್ಕೆ ಆಗಮಿಸಿರುವ ಇವರು ಬಸ್ ನಿಲ್ದಾಣದಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಲ್ಲರ ಮನ ಕಲಕುತ್ತಿತ್ತು. ಬಳಿಕ ಸಾರ್ವಜನಿಕರೇ 108 ಆಂಬುಲೆನ್ಸ್ಗೆ ಕರೆ ಮಾಡಿ ರೋಗಿ ತಲುಪಬೇಕಿದ್ದ ಸ್ಥಳಕ್ಕೆ ತೆರಳಲು ಸಹಾಯ ಮಾಡಿದರು.
ಪ್ರಯಾಣಿಕರ ಪರದಾಟ.
ನಿನ್ನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಾಯುವಜ್ರ ಬಸ್ಗಳ ಮೇಲೂ ಕಲ್ಲು ತೂರಾಟ ನಡೆದಿತ್ತು. ಇಂದು ಸಹ ನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸದ್ಯಕ್ಕೆ ವಿಮಾನ ನಿಲ್ದಾಣದಿಂದ ನಗರಕ್ಕೆ ವಾಯುವಜ್ರ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ವಿಮಾನ ನಿಲ್ದಾಣದ ವಾಯುವಜ್ರ ಬಸ್ ನಿಲ್ದಾಣದ ಬಳಿ ಪ್ರಯಾಣಿಕರು ಬಸ್ಗಳಿಲ್ಲದೆ ಪರದಾಡುತ್ತಿದ್ದಾರೆ. ಕೆಲ ಪ್ರಯಾಣಿಕರು ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದು, ಕಾವೇರಿ ಗಲಾಟೆ ವಿಮಾನ ನಿಲ್ದಾಣಕ್ಕೂ ಸ್ವಲ್ಪ ಮಟ್ಟಿಗೆ ತಟ್ಟಿದೆ. ಬೆಂಗಳೂರಿನಲ್ಲಿ ಪ್ರತಿಭಟನೆಯ ಸ್ಥಿತಿ ಅವಲೋಕಿಸಿ ವಿಮಾನ ನಿಲ್ದಾಣದಿಂದ ಬಸ್ಗಳನ್ನು ರಸ್ತೆಗಿಳಿಸಲು ತೀರ್ಮಾನಿಸಲಾಗಿದೆ. ಜತೆಗೆ ವಿಮಾನ ನಿಲ್ದಾಣದಲ್ಲಿ ತಮಿಳುನಾಡಿನ ವಾಹನಗಳ ಸುಳಿವೇ ಇಲ್ಲದಂತಾಗಿದೆ.
Comments are closed.