
ಹಲವು ಮೊದಲುಗಳನ್ನು ಬೆನ್ನಿಗಿರಿಸಿಕೊಂಡು ತೆರೆ ಕಾಣಲು ಸಿದ್ಧವಾಗಿರುವ ‘ದೊಂಬರಾಟ’ ರಂಜಿತ್ ಸುವರ್ಣ ನಿರ್ದೇಶನದ ಚೊಚ್ಚಿಲ ಚಿತ್ರ. ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾದಲ್ಲಿ ನಟರಾದ ಉಪೇಂದ್ರ ಹಾಗೂ ಶ್ರೀಮುರಳಿ ಹಾಡಿದ್ದಾರೆ ಎಂಬುದು ವಿಶೇಷ.
ಎಸ್ಸೆಸ್ಸೆಲ್ಸಿ ನಂತರ ಒಂದು ವರ್ಷ ಡಿಪ್ಲೊಮಾ ಕಲಿತ ಹುಡುಗ ವಿದ್ಯಾಭ್ಯಾಸ ತೊರೆದು ಸಂಪಾದನೆಯ ಹಾದಿ ಹಿಡಿದ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹುಡುಗ ನಂತರ ಆರಿಸಿಕೊಂಡಿದ್ದು ಕ್ಯಾಬ್ ಡ್ರೈವರ್ ಕೆಲಸವನ್ನು.
ಡ್ರೈವಿಂಗ್ ಮಾಡುವಾಗ ಗಾಡಿ ಪದೇಪದೆ ಅವಘಡಗಳಿಗೆ ತುತ್ತಾಗುತ್ತಿತ್ತು. ಇದರಿಂದ ಬೇಸತ್ತು ಕೆಲಸ ತೊರೆಯುವ ಯೋಚನೆಯಲ್ಲಿದ್ದ ಅವರಿಗೆ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡಿದ್ದ ಒಂದು ಸಿನಿಮಾ ಜಾಹೀರಾತು ಕಣ್ಣಿಗೆ ಬಿತ್ತು. ಸಿನಿಮಾದಲ್ಲಿ ಹೆಸರು ಮಾಡಬೇಕು ಎನ್ನುವ ಹಂಬಲದಲ್ಲಿದ್ದ ಈತನಿಗೆ ಹಣ ಕಳೆದುಕೊಂಡಾಗಲೇ ಅದೊಂದು ಮೋಸದ ಜಾಲವೆಂದು ತಿಳಿದದ್ದು.
ನಂತರ ತನ್ನ ಮಾವನ ಸಹಕಾರದೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಈತನಿಗೆ ಈಗ ಕನ್ನಡ ಹಾಗೂ ತುಳು ಸಿನಿಮಾರಂಗದಲ್ಲಿ ಸಹಾಯಕ ನಿರ್ದೇಶಕ, ಸಂಭಾಷಣೆ ಮತ್ತು ಸಾಹಿತ್ಯ, ಸಾಹಸ ನಿರ್ದೇಶನ, ನಿರ್ಮಾಣ ನಿರ್ವಹಣೆ, ನಟನೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸತತ ಎಂಟು ವರ್ಷದ ಅನುಭವವಿದೆ. ಇದೀಗ ತುಳು ಸಿನಿಮಾವೊಂದರ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
ಇದು ತುಳು ಸಿನಿಮಾ ರಂಗದಲ್ಲಿ ಕೆಲವು ಪ್ರಥಮಗಳಿಗೆ ಕಾರಣವಾಗುತ್ತಿರುವ ‘ದೊಂಬರಾಟ’ ಸಿನಿಮಾ ನಿರ್ದೇಶಕ ರಂಜಿತ್ ಸುವರ್ಣ ಅವರ ಜೀವನದ ಏಳುಬೀಳಿನ ಕಥೆ.ರಂಜಿತ್ ಸುವರ್ಣ ಅವರು ಸಿನಿಮಾ ಕ್ಷೇತ್ರದಲ್ಲಿ ಬೆಳೆಯಬೇಕೆಂಬ ಹಂಬಲವನ್ನು ಗಮನಿಸಿದ ಮಾವ ರಾಜೇಶ್ ಸುವರ್ಣ ತಮ್ಮ ಗೆಳೆಯನ ಮೂಲಕ ಕನ್ನಡದ ‘ಅಚ್ಚುಮೆಚ್ಚು’ ಸಿನಿಮಾದಲ್ಲಿ ದುಡಿಯುವ ಅವಕಾಶವನ್ನು ಒದಗಿಸಿದರು. ಸಹಾಯಕ ನಿರ್ದೇಶನ ಹಾಗೂ ಸಂಭಾಷಣೆ ಬರೆಯುವ ಮೂಲಕ ಚಲನಚಿತ್ರ ಯಾನ ಆರಂಭಿಸಿದ ರಂಜಿತ್ ಸುವರ್ಣ, ‘ಬೇಟೆ’ ಸಿನಿಮಾದ ಮೂಲಕ ನಟನಾಗಿಯೂ ಗುರುತಿಸಿಕೊಂಡರು.
ತುಳು ಭಾಷೆಯ ‘ಪವಿತ್ರ’ ಸಿನಿಮಾಕ್ಕೆ ಸಾಹಿತ್ಯ ಬರೆದು ಸೈ ಎನಿಸಿಕೊಂಡರು. ಪ್ರತಿಭೆ ಮತ್ತು ಛಲದಿಂದ ಸಿನಿಮಾ ಕ್ಷೇತ್ರದಲ್ಲಿ ಬೆಳೆಯುತ್ತಿರುವ ರಂಜಿತ್ ಸುವರ್ಣ ಈಗಲೂ ತಾನು ಚಿತ್ರರಂಗದಲ್ಲಿ ಬೆಳೆಯಲು ಸಹಾಯ ಮಾಡಿದವರೆಲ್ಲರನ್ನು ಸ್ಮರಿಸುತ್ತಾರೆ.
‘ಚಂಡಿಕೋರಿ’, ‘ರಿಕ್ಷಾ ಡ್ರೈವರ್’, ‘ಚಾಲಿಪೋಲಿಲು’, ‘ದಿಬ್ಬಣ’, ‘ಒರಿಯನ್ ತೂಂಡ ಒರಿಯಗ್ ಆಪುಜಿ’, ‘ಡಾನ್ಸ್ ಕುಡ್ಲ ಡಾನ್ಸ್’ ಮುಂತಾದ ಸಿನಿಮಾಗಳಲ್ಲಿ ಸಹನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ ಇವರು ‘ಬೊಳ್ಳಿಲು’ ಸಿನಿಮಾಕ್ಕೆ ಸಾಹಸ ನಿರ್ದೇಶನವನ್ನೂ ಮಾಡಿದ್ದಾರೆ. ರಂಜಿತ್ ಸುವರ್ಣ ಅವರ ಕೆಲಸವನ್ನು ಗಮನಿಸಿದ ರಾಜೇಶ್ ಬ್ರಹ್ಮಾವರ್ ಅವರು ತಮ್ಮ ನಿರ್ಮಾಣದ ‘ದೊಂಬರಾಟ’ ತುಳು ಚಿತ್ರಕ್ಕೆ ನಿರ್ದೇಶಕರಾಗುವ ಅವಕಾಶವನ್ನು ನೀಡಿದರು.
ಕೋಸ್ಟಲ್ವುಡ್ಗೆ ಸಂಬಂಧಿಸಿದಂತೆ ‘ದೊಂಬರಾಟ’ದ ಮೂಲಕ ಮೊದಲ ಬಾರಿ ತುಳು ಚಿತ್ರವೊಂದು ರಾಜ್ಯದಾದ್ಯಂತ 100 ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಕೋಸ್ಟಲ್ವುಡ್ ಸಿನಿಮಾವೊಂದು ತುಳುನಾಡಿನ ಆಚೆಗೂ ಹೆಜ್ಜೆ ಇಡುತ್ತಿದೆ.
ಚಿತ್ರದ ಹಾಡೊಂದಕ್ಕೆ ಸಾವಿರ ನೃತ್ಯಗಾರರನ್ನು ಬಳಸಿಕೊಂಡಿದ್ದು ಕೂಡಾ ತುಳು ಸಿನಿಮಾ ಇತಿಹಾಸದಲ್ಲಿ ಮೊದಲು. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಾಯಕ ನಟ ಶ್ರೀ ಮುರಳಿ ಈ ಚಿತ್ರದಲ್ಲಿ ಹಾಡಿರುವುದು ವಿಶೇಷ. ಪ್ರಥಮ ನಿರ್ದೇಶನದಲ್ಲಿಯೇ ದ್ವಿಪಾತ್ರಾಭಿನಯಕ್ಕೆ ಆ್ಯಕ್ಷನ್ ಕಟ್ ಹೇಳಿದ ರಂಜಿತ್ ಸುವರ್ಣ ಈ ಸಿನಿಮಾದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಾರೆ.
ಕೌಟುಂಬಿಕ ಹಾಸ್ಯವನ್ನು ಒಳಗೊಂಡಿರುವ ‘ದೊಂಬರಾಟ’ ಕುಟುಂಬದ ಸದಸ್ಯರೆಲ್ಲರೂ ಕುಳಿತು ನೋಡಬಹುದಾದ ಸಿನಿಮಾ ಎಂದು ಹೇಳುತ್ತಾರೆ ರಂಜಿತ್. ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ಆಸಕ್ತಿ ಇರುವ ಒಳ್ಳೆಯ ನಿರ್ಮಾಪಕರು ಸಿಕ್ಕರೆ ಮತ್ತಷ್ಟು ಸಿನಿಮಾಗಳನ್ನು ನಿರ್ದೇಶಿಸುವ ಉತ್ಸಾಹದಲ್ಲಿದ್ದಾರೆ. ಸೆ.15ರಂದು ಬಿಡುಗಡೆಯಾಗುತ್ತಿರುವ ‘ದೊಂಬರಾಟ’ದಲ್ಲಿ ಅಮಿತ್ ರಾವ್, ಪೂಜಾಶೆಟ್ಟಿ, ಭವ್ಯಾ, ಅರವಿಂದ ಬೋಳಾರ, ಉಮೇಶ್ ಮಿಜಾರು ನಟಿಸಿದ್ದಾರೆ.
–ಧೀರಜ್ ಪೊಯ್ಯೆಕಂಡ
Comments are closed.