
ಮುಂಬಯಿ: ಮಿಸ್ ದಿವಾ 2016 ಸ್ಪರ್ಧೆಯಲ್ಲಿ ಬೆಂಗಳೂರಿನ 22 ವರ್ಷ ವಯಸ್ಸಿನ ಸುಂದರಿ ರೋಶ್ಮಿತಾ ಹರಿ ಮೂರ್ತಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 2017ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನೂ ಅವರು ಪಡೆದಿದ್ದಾರೆ.
ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಮಂಗಳೂರಿನ ಶ್ರೀನಿಧಿ ಆರ್. ಶೆಟ್ಟಿ, “ಮಿಸ್ ದಿವಾ ಸುಪ್ರಾನ್ಯಾಶನಲ್ 2016′ ಪ್ರಶಸ್ತಿ ಗಳಿಸಿದ್ದಾರೆ. ಅಸ್ಸಾಂನ ಆರಾಧನಾ 2ನೇ ರನ್ನರ್ ಅಪ್ ಆದರು. ಅಂತಿಮ ಸುತ್ತಿನಲ್ಲಿ ಒಟ್ಟು 16 ಮಂದಿ ಇದ್ದರು.
ಸ್ಪರ್ಧೆಯ ತೀರ್ಪುಗಾರರ ಸಮಿತಿಯಲ್ಲಿ ಮಾಜಿ ಭುವನಸುಂದರಿ, ನಟಿ ಲಾರಾ ದತ್ತ, ನಟರಾದ ಅರ್ಜುನ್ ರಾಂಪಾಲ್, ಅಭಯ್ ಡಿಯೋಲ್, ನಟಿ ಅದಿತಿ ರಾವ್ ಹೈದರಿ, ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಇದ್ದರು.
ಕಿನ್ನಿಗೋಳಿ ತಾಳಿಪಾಡಿ ಗುತ್ತಿನ ಶ್ರೀನಿಧಿ ಶೆಟ್ಟಿ :ಮೊದಲ ರನ್ನರ್ ಅಪ್
ಮೊದಲ ರನ್ನರ್ ಅಪ್ ಶ್ರೀನಿಧಿ ಆರ್. ಶೆಟ್ಟಿ ಅವರು ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗುತ್ತಿನವರು. ಶ್ರೀನಿಧಿ ಅವರು ಮೂಲ್ಕಿ ರಮೇಶ್ ವಿ. ಶೆಟ್ಟಿ ಮತ್ತು ತಾಳಿಪಾಡಿ ಗುತ್ತು ದಿ| ಕುಶಲಾ ಆರ್. ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು, ಮೂಲ್ಕಿ ನಾರಾಯಣಗುರು ಶಾಲೆ ಮತ್ತು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾ ಭ್ಯಾಸ ಪಡೆದಿದ್ದರು. ಬೆಂಗಳೂರಿನ ಜೈನ್ ಎಂಜಿನಿಯ ರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ.
Comments are closed.