ಕೊಲ್ಕತ್ತಾ, ಸೆ.12: ಕಾಲೇಜು ಯುವತಿಯನ್ನು ಅಪಹರಿಸಿ ಕೆಂಪುದೀಪ ಪ್ರದೇಶಕ್ಕೆ ತಳ್ಳುವ ಪಿಂಪ್ಗಳ ಸಂಚನ್ನು ಟ್ರಾಫಿಕ್ ಪೊಲೀಸ್ ಒಬ್ಬರು ಸಮಯಪ್ರಜ್ಞೆ ಮೆರೆದು ವಿಫಲಗೊಳಿಸಿದ ಘಟನೆ ಇಲ್ಲಿನ ಕೆಂಪುದೀಪ ಪ್ರದೇಶದ ಸಮೀಪ ನಡೆದಿದೆ.
ಶನಿವಾರ ರಾತ್ರಿ 10ರ ಬಳಿಕ ಟ್ರಾಫಿಕ್ ಪೊಲೀಸ್ ರಣಬೀರ್ ದಾಸ್, ಪಾನಪತ್ತರಾಗಿ ಬೈಕ್ ಚಲಾಯಿಸುವವರಿಗೆ ಬಲೆ ಬೀಸಲು ಚಿತ್ಪುರ ರಸ್ತೆ ಬಳಿ ಕಾವಲು ಕಾಯುತ್ತಿದ್ದರು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಒಂದು ಬೈಕ್ ಹಿಡಿದ ಸಂದರ್ಭ, ಪಕ್ಕದಲ್ಲಿ ಹುಡುಗಿಯ ಚೀರಾಟ ಕೇಳಿಬಂತು. ತಕ್ಷಣ ಅಲ್ಲಿಗೆ ಧಾವಿಸಿದಾಗ, ಮಬ್ಬು ಬೆಳಕಿನಲ್ಲಿ ಕೆಲ ಯುವಕರು, ಯುವತಿಯ ಸುತ್ತ ನೆರೆದಿದ್ದುದು ಗಮನಕ್ಕೆ ಬಂತು. ದಾಸ್ ಅವರ ಪ್ರಕಾರ, ಈ ಯುವಕರು ಸೋನಾಗಚ್ಚಿ ಪ್ರದೇಶದ ವೇಶ್ಯಾದಲ್ಲಾಳಿಗಳು. ಯಾರೂ ಆ ಪ್ರದೇಶವನ್ನು ಪ್ರವೇಶಿಸುವ ಧೈರ್ಯ ಮಾಡುವುದಿಲ್ಲ.
ಈ ಯುವಕರು ಯುವತಿಯರಿಗೆ ಬಲೆ ಬೀಸಿ ಅವರನ್ನು ಮಾಂಸದಂಧೆಗೆ ತಳ್ಳುವವರು.ರಿವಾಲ್ವರ್ ತೆಗೆದುಕೊಂಡು ಅವರತ್ತ ದಾಸ್ ಶೂಟ್ ಮಾಡಿದರು. ತಕ್ಷಣ ಯುವತಿಯನ್ನು ಅಲ್ಲಿ ಬಿಟ್ಟು, ಯುವಕರು ಪರಾರಿಯಾದರು. “ದಾಸ್ ಅಲ್ಲಿಗೆ ಬಂದಾಗ ಯುವತಿ ಭೀತಿಯಿಂದ ನಡುಗುತ್ತಿದ್ದಳು. ಹತ್ತು ನಿಮಿಷ ಕಾಲ ಆಕೆಗೆ ಮಾತನಾಡಲೂ ಸಾಧ್ಯವಾಗಲಿಲ್ಲ. ಆಕೆ ಸಾವರಿಸಿಕೊಳ್ಳಲು ದಾಸ್ ಅವಕಾಶ ನೀಡಿದರು” ಎಂದು ಟ್ರಾಫಿಕ್ ಗಾರ್ಡ್ ಉಸ್ತುವಾರಿಯ ಅಧಿಕಾರಿ ಅಲೋಕ್ ಸನ್ಯಾಲ್ ವಿವರಿಸಿದರು.
ನಾರ್ತ್ 24 ಪರಗಣಾ ಜಿಲ್ಲೆಯ ಖರ್ದ್ ಒರದೇಶದ ನಿವಾಸಿಯಾಗಿದ್ದ ಯುವತಿ ಉತ್ತರ ಕೊಲ್ಕತ್ತಾ ಕಾಲೇಜಿನಲ್ಲಿ ಮನಃಶಾಸ್ತ್ರ ಅಧ್ಯಯನ ಮಾಡುತ್ತಿದ್ದಳು. ಮನೆಯಲ್ಲಿ ಯಾತನೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಳಗ್ಗೆ ಕೊಲ್ಕತ್ತಾ ಬಿಟ್ಟು ಎಸ್ಪಾಂಡೆ ಸೇರಿದ್ದಳು. ಇಡೀ ದಿನ ಅಲೆದಾಡಿ ಕತ್ತಲಾಗುವ ವೇಳೆಗೆ ಕಾಲೇಜಿನತ್ತ ಹೆಜ್ಜೆ ಹಾಕಿದ್ದಳು. ಆಕೆಯನ್ನು ಅನುಸರಿಸಿದ ಯುವಕರ ಗುಂಪು ಆಕೆಯನ್ನು ಸುತ್ತುವರಿದಿತ್ತು ಎನ್ನುವುದು ಆಕೆಯನ್ನು ವಿಚಾರಿಸಿದಾಗ ತಿಳಿದುಬಂತು. ಆಕೆಯನ್ನು ಬರ್ಟೋಲಾ ಠಾಣೆವರೆಗೂ ಕರೆದೊಯ್ದ ಪೇದೆ, ಪಾಲಕರಿಗೆ ಸುದ್ದಿ ಮುಟ್ಟಿಸಿದರು.

Comments are closed.