ರಾಷ್ಟ್ರೀಯ

ಓಣಂ ಆಚರಣೆ: ವಿವಾದ, ಫತ್ವಾ ಮತ್ತು ಪ್ರತಿಭಟನೆ

Pinterest LinkedIn Tumblr

onam

ತಿರುವನಂತಪುರಂ: ಕೇರಳದಲ್ಲಿ ಆಚರಿಸಲ್ಪಡುವ ಓಣಂ ಹಬ್ಬವನ್ನು ಮುಸ್ಲಿಮರು ಆಚರಿಸಬಾರದು ಎಂದು ಕೋಝಿಕ್ಕೋಡ್ ಜಿಲ್ಲೆಯ ಸಲಾಫಿ ಮಸೀದಿಯ ಇಮಾಮ್ ಫತ್ವಾ ಹೊರಡಿಸಿದ್ದರು. ಆದರೆ ಜಾತಿ ಧರ್ಮಗಳ ಭೇದವಿಲ್ಲದೆ ಆಚರಿಸಲ್ಪಡುವ ಈ ಹಬ್ಬಕ್ಕೆ ಫತ್ವಾ ಹೊರಡಿಸಿದ್ದನ್ನು ಖಂಡಿಸಿ ಫಯೀಜ್ ಉಮರ್ ಎಂಬ ವ್ಯಕ್ತಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಎಲ್ಲ ಮಲಯಾಳಿಗಳಿಗೆ ನಗುಮುಖದಿಂದ ಓಣಂ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಒಂದು ವೇಳೆ ಓಣಂ ಆಚರಿಸುವುದರಿಂದ ಇಸ್ಲಾಂ ಧರ್ಮ ನಶಿಸಿ ಹೋಗುವುದಾದರೆ ನಶಿಸಿ ಹೋಗಲಿ ಎಂದು ಹೇಳುತ್ತಾ ಮಾಪ್ಪಿಳ ಓಣಪ್ಪಾಯಸ ವಿತರಣೆ ಮಾಡುತ್ತಿದ್ದೇನೆ ಎಂಬ ಬ್ಯಾನರ್ ಹಾಕಿ, ಕುಟ್ಟಿಯಾಡಿ ನಗರದಲ್ಲಿ ಎಲ್ಲರಿಗೂ ಪಾಯಸ ವಿತರಣೆ ಮಾಡಿದ್ದಾರೆ. ತಮ್ಮ ಈ ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಭಾಗವಹಿಸಿದ್ದರು ಎಂದು ಫಯೀಜ್ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ.

ಇತ್ತ ಆರ್‍ಎಸ್‍ಎಸ್ ಸಂಘಟನೆಯ ‘ಕೇಸರಿ’ ನಿಯತಕಾಲಿಕದಲ್ಲಿ ಪ್ರಕಟವಾದ ಬರಹವೊಂದರಲ್ಲಿ ಓಣಂ ಹಬ್ಬವನ್ನು ವಾಮನ (ವಿಷ್ಣುವಿನ ಅವತಾರ)ನ ಹುಟ್ಟುಹಬ್ಬವಾಗಿ ಆಚರಿಸಬೇಕು ಎಂದು ಹೇಳಲಾಗಿದೆ. ಕೆ. ಉಣ್ಣಿಕೃಷ್ಣನ್ ನಂಬೂದಿರಿ ಈ ಲೇಖನವನ್ನು ಬರೆದಿದ್ದು, ಓಣಂ ಎಂಬುದು ವಾಮನನ ಹುಟ್ಟುಹಬ್ಬದ ಸಂಕೇತವಾಗಿದೆ. ಅದಲ್ಲದೆ ರಾಕ್ಷಸ ರಾಜ ಮಹಾಬಲಿ ನಾಡಿನ ಪ್ರಜೆಗಳನ್ನು ಭೇಟಿ ಮಾಡಲು ಬರುವ ದಿನದ ಪ್ರತೀಕವಲ್ಲ ಎಂದು ಹೇಳಿದ್ದು ವಿವಾದ ಸೃಷ್ಟಿಸಿದೆ.

ಈ ಲೇಖನದ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ (ಎಂ) ನೇತಾರೆ, ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಓಣಂ ಹಬ್ಬಕ್ಕೆ ಮಹಾಬಲಿ ಕೇರಳಕ್ಕೆ ಭೇಟಿ ನೀಡುತ್ತಾನೆ ಎಂಬ ನಂಬಿಕೆ ಕೇರಳಿಗರದ್ದು. ಆದರೆ ಆ ನಂಬಿಕೆಯನ್ನು ತಳ್ಳಿ ವಾಮನನ್ನು ವೈಭವೀಕರಿಸಲು ಆರ್ ಎಸ್ ಎಸ್ ಪ್ರಯತ್ನಿಸುತ್ತಿದೆ. ಈ ಮೂಲಕ ಆರ್ ಎಸ್ ಎಸ್ ಪುರೋಹಿತಶಾಹಿ ಧೋರಣೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಟೀಕಿಸಿದ್ದಾರೆ.

Comments are closed.