
ಬೆಂಗಳೂರು, ಸೆ. ೧೧- ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮಾಡಿಕೊಂಡಿರುವ ಎಡವಟ್ಟನ್ನು ಸರಿಪಡಿಸಿಕೊಳ್ಳಲು ಕಾವೇರಿ ಉಸ್ತುವಾರಿ ಸಭೆ ನಾಳೆ ನಡೆಯಲಿರುವ ಕಾವೇರಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಕೊನೆಯ ಅವಕಾಶವಿದ್ದು, ಈ ಅವಕಾಶವನ್ನು ರಾಜ್ಯ ಸರ್ಕಾರ ಬಳಸಿಕೊಂಡು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಮುಂದಾಗಬೇಕು ಎಂದು ರಾಜ್ಯದ ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿವಾದ ಈಗ ಮತ್ತೊಂದು ಘಟ್ಟಕ್ಕೆ ಬಂದಿದೆ. ನಾಳಿನ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಹಾಗೂ 16ರಂದು ಸುಪ್ರೀಂಕೋರ್ಟಿನಲ್ಲಿ ನಡೆಯಲಿರುವ ವಿಚಾರಣೆ ಎರಡೂ ಅತ್ಯಂತ ಮಹತ್ವದ್ದು, ನಾಳಿನ ಸಭೆಯಲ್ಲಿ ಸರ್ಕಾರ ಸಮರ್ಥ ವಾದ ಮಂಡಿಸುವ ಮೂಲಕ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬಹುದು ಎಂದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಮಳೆ ಕಡಿಮೆಯಾಗಿ ಸಂಕಷ್ಟ ವರ್ಷವಾಗಿದೆ ಎಂಬುದನ್ನು ನಾಳಿನ ವಾದದ ಸಂದರ್ಭದಲ್ಲಿ ಅಂಕಿ ಅಂಶಗಳ ಸಮೇತ ನಿರೂಪಿಸಬೇಕು. ಜೊತೆಗೆ ಕಾವೇರಿ ಕಣಿವೆಯ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ನೀರಿನ ಕೊರತೆ ಇಲ್ಲ, ಅಂತರ್ಜಲ ಉತ್ತಮವಾಗಿದೆ ಎಂದು ತಮಿಳುನಾಡು ಸರ್ಕಾರದ ವೆಬ್‌ಸೈಟ್‌ನಲ್ಲೇ ಹೇಳಿದೆ. ಇದನ್ನೆಲ್ಲ ಬಳಸಿಕೊಂಡು ಕಾವೇರಿ ಸಂಕಷ್ಟದ ವರ್ಷ ಎಂಬುದನ್ನು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ ಎಂದರು.
ತಮಿಳುನಾಡು ದಕ್ಷಿಣ ಕರ್ನಾಟಕದ ಒಳನಾಡಿನ ಮಳೆಯ ಪ್ರಮಾಣವನ್ನು ಮುಂದಿಟ್ಟುಕೊಂಡು ಕಾವೇರಿ ಕಣಿವೆಯಲ್ಲಿ ಮಳೆ ಕಡಿಮೆಯಾಗಿಲ್ಲ ಎಂಬುದನ್ನು ನಿರೂಪಿಸಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಕಾವೇರಿ ಕಣಿವೆಯಲ್ಲಿ ಮಳೆ ಕಡಿಮೆಯಾಗಿರುವುದನ್ನು ಅಂಕಿ- ಅಂಶಗಳ ಸಮೇತ ಸಾಬೀತುಪಡಿಸಬೇಕು ಎಂದರು.
ತಜ್ಞರ ಸಮಿತಿಗೆ ಬೇಡಿಕೆ
ತಮಿಳುನಾಡಿನ ಹಾಗೂ ರಾಜ್ಯದ ಕಾವೇರಿ ಕಣಿವೆಯ ಸ್ಥಿತಿಗತಿಯ ಅಧ್ಯಯನಕ್ಕೆ ತಜ್ಞರ ತಂಡವನ್ನು ಕಳುಹಿಸುವಂತೆ ಸರ್ಕಾರ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಒತ್ತಾಯಿಸಬೇಕು. ಆಗಾದಾಗ ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ನ್ಯಾಯ ಸಿಗುವ ಸಾಧ್ಯತೆಗಳಿವೆ ಎಂದರು.
ವಾಸ್ತವ ಸ್ಥಿತಿ ಅಧ್ಯಯನಕ್ಕೆ ತಜ್ಞರ ತಂಡ ಬಂದರೆ ತಮಿಳುನಾಡಿನ ಸುಳ್ಳು ಹೇಳಿಕೆಗಳು, ವಾದ ಎಲ್ಲವೂ ಬಹಿರಂಗವಾಗುತ್ತದೆ. ಕಾವೇರಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಜತೆ ಇದೆ. ಮತ್ತೆ ಪ್ರಮಾದ ಮಾಡಿದರೆ ಜನ ಈ ಸರ್ಕಾರವನ್ನು ಕ್ಷಮಿಸಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಾವೇರಿ ವಿಚಾರದಲ್ಲಿ ರಾಜ್ಯದ ವಕೀಲರಿಗೆ ಸರಿಯಾದ ಮಾಹಿತಿ, ಅಂಕಿ- ಅಂಶಗಳು ತಲುಪಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಇನ್ನು ಮುಂದಾದರು ಸರ್ಕಾರ ಸರಿಯಾದ ಅಂಕಿ -ಅಂಶ ಒದಗಿಸುವ ಕೆಲಸ ಮಾಡಬೇಕು. ಆಗಾದಾಗ ನಮ್ಮ ವಾದ ಮಂಡನೆಗೆ ಬಲ ಬರುತ್ತದೆ ಎಂದರು.
ತಮಿಳುನಾಡಿನಲ್ಲಿ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿಗಳನ್ನು ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಅವರೇ ಖುದ್ದು ನೋಡುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ತಂಡವೇ ನೋಡುತ್ತದೆ ಎಂಬ ಮಾತು ಆಡುತ್ತಾರೆ. ಇದೇ ನಮಗೂ ತಮಿಳುನಾಡಿಗೂ ಇರುವ ವ್ಯತ್ಯಾಸ ಎಂದರು.
ಈ ಹಿಂದೆಯೆಲ್ಲ ಕಾವೇರಿ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಬಂದಾಗ ಜಲಸಂಪನ್ಮೂಲ ಸಚಿವರಾಗಿ ತಾವೇ ಖುದ್ದು ನ್ಯಾಯಾಲಯದಲ್ಲಿ ಹಾಜರಿರುತ್ತಿದ್ದುದ್ದನ್ನು ನೆನಪು ಮಾಡಿಕೊಂಡ ಅವರು ಈಗಿನ ಸಂಪನ್ಮೂಲ ಸಚಿನರು ದ್ವಂದ್ವ ಹೇಳಿಕೆಗಳನ್ನು ನಿಲ್ಲಿಸಿ ಕಾನೂನಿನ ಹೋರಾಟದತ್ತ ಹೆಚ್ಚಿನ ಗಮನ ನೀಡಬೇಕು ಎಂದು ಒತ್ತಾಯಿಸಿದರು.
ತಡ
ತಮಿಳುನಾಡಿಗೆ ನೀರು ಬಿಡಬೇಕು ಎಂಬ ಸುಪ್ರೀಂಕೋರ್ಟಿನ ತೀರ್ಪನ್ನು ಮಾರ್ಪಾಡು ಮಾಡುವಂತೆ ರಾಜ್ಯಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅರ್ಜಿ ತಡವಾಗಿದೆ. ಮೊದಲೇ ಈ ಕೆಲಸ ಮಾಡಬೇಕಾಗಿತ್ತು. ಹಿಂದೆಯೆಲ್ಲಾ ಸುಪ್ರೀಂಕೋರ್ಟ್ ತನ್ನ ಆದೇಶಗಳನ್ನು ಮಾರ್ಪಡಿಸಿದ ಪ್ರಕರಣಗಳು ಇವೆ. ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲು ವಿಳಂಬ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಗಳಿಗೆ ಪತ್ರ ಬರೆದಿದ್ದರ ಉದ್ದೇಶವೇ ಅರ್ಥವಾಗುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡುವುದಾಗಿ ಹೇಳಿಕೆ ನೀಡಿ ನೀರು ಬಿಟ್ಟ ನಂತರ ಪ್ರಧಾನಿಗೆ ಪತ್ರ ಬರೆಯುವುದು ಎಷ್ಟರ ಮಟ್ಟಿಗೆ ಸರಿ. ಪ್ರಧಾನಿಯವರು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಬೇಡಿ ಎಂದು ಹೇಳಲು ಸಾಧ್ಯವೇ ಎಂದವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ವಕ್ತಾರ, ಶಾಸಕ ಸುರೇಶ್ ಕುಮಾರ್, ಮಂಜುಳಾ ಉಪಸ್ಥಿತರಿದ್ದರು.
Comments are closed.