ಬೆಂಗಳೂರು, ಸೆ. ೧೦ – ಸಾಂಪ್ರದಾಯಿಕ ಹಾಗೂ ಪಾರಂಪರಿಕ ವೈದ್ಯ ಪದ್ಧತಿ ಪ್ರಯೋಜನ, ಅದರ ಲಾಭಗಳು ಎಲ್ಲರಿಗೂ ಸಿಗುವಂತಾಗಲು ವಿಶ್ವಸಂಸ್ಥೆ ಅಡಿಯಲ್ಲಿ ಅಂತರರಾಷ್ಟ್ರೀಯ ಪಾರಂಪರಿಕ ವೈದ್ಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ಗೊಬ್ಬರ ಸಚಿವ ಅನಂತ್ ಕುಮಾರ್ ಹೇಳಿದರು.
ನಗರದಲ್ಲಿ ಇಂದು ನಡೆದ ಬ್ರಿಕ್ಸ್ ರಾಷ್ಟ್ರಗಳ ಆರೋಗ್ಯ ಶೃಂಗಸಭೆಯ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಅವರು, ಪಾರಂಪರಿಕ ವೈದ್ಯ ಪದ್ಧತಿಯನ್ನು ಜಗತ್ತಿನ ಎಲ್ಲೆಡೆ ಪರಿಚಯಿಸಲು ವಿಶ್ವ ಆರೋಗ್ಯ ಸಂಸ್ಥೆ ಆಶ್ರಯದಲ್ಲಿ ಈ ಪಾರಂಪರಿಕ ವೈದ್ಯ ವಿಜ್ಞಾನದ ಅಂತಾರಾಷ್ಟ್ರೀಯ ವೇದಿಕೆಯನ್ನು ಅಸ್ತಿತ್ವಕ್ಕೆ ತರುವ ಅಗತ್ಯವಿದೆ ಎಂದರು.
ಪಾರಂಪರಿಕ ವೈದ್ಯ ಪದ್ಧತಿ ಜನರ ಆರೋಗ್ಯ ರಕ್ಷಣೆಗೆ ಹೇಳಿ ಮಾಡಿಸಿದಂತಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಆಯುರ್ವೇದ, ಯುನಾನಿ, ಆಯುಷ್ ಇವುಗಳನ್ನೆಲ್ಲಾ ಆಧುನಿಕ ವೈದ್ಯ ಪದ್ಧತಿಯೊಂದಿಗೆ ಸಮ್ಮಿಲನ ಮಾಡಿ ಜನರ ಆರೋಗ್ಯ ರಕ್ಷಣೆಗೆ ಏಕೀಕೃತ ಆರೋಗ್ಯ ಪದ್ಧತಿಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ ಅಡಿಯಲ್ಲಿ ಪಾರಂಪರಿಕ ವೈದ್ಯ ಪದ್ಧತಿಯ ಅಂತರರಾಷ್ಟ್ರೀಯ ವೇದಿಕೆಯನ್ನು ಸ್ಥಾಪಿಸುವ ಮೂಲಕ ಬ್ರಿಕ್ಸ್ ರಾಷ್ಟ್ರಗಳಲ್ಲದೆ, ಜಗತ್ತಿನ ಎಲ್ಲ ದೇಶಗಳಿಗೂ ಪಾರಂಪರಿಕ ವೈದ್ಯ ಪದ್ಧತಿಯನ್ನು ಪರಿಚಯಿಸಲು ಸಾಧ್ಯವಾಗುತ್ತದೆ ಎಂದರು.
ಯೋಗವನ್ನು ಪ್ರಧಾನಿ ನರೇಂದ್ರಮೋದಿ ಅವರು ಅಂತಾರಾಷ್ಟ್ರೀಕರಣಗೊಳಿಸಿದ ಪರಿಣಾಮ ಇಂದು 150 ದೇಶಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗದ ಲಾಭ ಜಗತ್ತಿನ ಜನರಿಗೆ ಸಿಕ್ಕಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೌಲಭ್ಯಗಳು ಸಿಗಬೇಕು. ಇದಕ್ಕಾಗಿ ಸದೃಢ ಆರೋಗ್ಯ ಆರೈಕೆ ಸೌಲಭ್ಯಗಳು ನಿರ್ಮಾಣವಾಗಬೇಕಿದೆ ಎಂದರು.
ಆರೋಗ್ಯವಿಲ್ಲದೆ ಯಾರೂ ಸಂತೋಷದಿಂದ ಜೀವಿಸಲು ಸಾಧ್ಯವಿಲ್ಲ. ಹಾಗಾಗಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಎಂದು ಅವರು ಹೇಳಿದರು.
ಪಾರಂಪರಿಕ ವೈದ್ಯ ಪದ್ಧತಿ ನಮ್ಮ ಪೂರ್ವಜರ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಮಹತ್ವದ ಪಾತ್ರ ವಹಿಸಿತ್ತು. ಈ ವೈದ್ಯ ಪದ್ಧತಿಯನ್ನು ಹೆಚ್ಚು ಜನಪ್ರಿಯತೆಗೊಳಿಸಬೇಕಿದೆ ಎಂದರು.
ಹೆಚ್ಚು ಉತ್ತೇಜನ
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರದ ಆಯುಷ್ ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಅವರು, ಕೇಂದ್ರ ಸರ್ಕಾರ ಪಾರಂಪರಿಕ ವೈದ್ಯ ಪದ್ಧತಿಗಳನ್ನು ಜನಪ್ರಿಯಗೊಳಿಸಲು ಹೆಚ್ಚಿನ ಉತ್ತೇಜನ ನೀಡುತ್ತಿದೆ. 2014 ರಲ್ಲಿ ಆಯುಷ್ ಮಿಷನ್ ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ರೋಗ ಬಂದವರಿಗೆ ಔಷಧೋಪಚಾರ ನೀಡಿ ಆರೈಕೆ ಮಾಡುವುದಕ್ಕಿಂತ ರೋಗ ಬಾರದಂತೆ ತಡೆಯುವುದಕ್ಕೆ ಹೆಚ್ಚಿನ ಗಮನ ನೀಡಬೇಕಿದೆ. ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವತ್ತ ಕೇಂದ್ರ ಸರ್ಕಾರ ಹೆಚ್ಚಿನ ಗಮನ ನೀಡಿವೆ ಎಂದರು.
ಜೀವನ ಶೈಲಿ ಆಧಾರಿತ ಖಾಯಿಲೆಗಳಾದ ಮಧುಮೇಹ, ರಕ್ತದೊತ್ತಡಗಳಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿ ರಾಮಬಾಣವಾಗಿದೆ. ಈ ಪದ್ಧತಿಯಿಂದ ಈ ರೋಗಗಳನ್ನು ತಡೆಯಲು ಸಾಧ್ಯ ಎಂಬುದು ಸಾಭೀತಾಗಿದೆ. ಬ್ರೆಜಿಲ್‌ನಲ್ಲಿ ಸಾಂಪ್ರದಾಯಿಕ ವೈದ್ಯ ಪದ್ಧತಿಯಿಂದ ರಕ್ತದೊತ್ತಡಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಖಿನ್ನತೆ ದೊಡ್ಡ ಸವಾಲು
ಈ ಶೃಂಗಸಭೆಯಲ್ಲಿ ಮಾತನಾಡಿದ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅವರು, ಖಿನ್ನತೆ ಇಡೀ ಜಗತ್ತಿಗೆ ಸವಾಲಾಗಿದೆ. ಶೇ. 50ರಷ್ಟು ಜನ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದರು.
ಸಾಂಪ್ರದಾಯಿಕ ವೈದ್ಯ ಪದ್ಧತಿಯ ಬಗ್ಗೆ ಯಾವುದೇ ಪೂರ್ವಾಗ್ರಹ ಪೀಡಿತ ಸಮಸ್ಯೆಗಳು ಬೇಡ. ಇದು ಜನರ ಒಳಿತಿಗಾಗಿಯೇ ಇರುವ ವೈದ್ಯ ಪದ್ಧತಿ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದರು.
ಸಾಂಪ್ರದಾಯಿಕ ವೈದ್ಯ ಪದ್ಧತಿ ಹಾಗೂ ಯೋಗದಂತಹ ಆರೋಗ್ಯ ಕಾಪಾಡುವ ಪದ್ಧತಿಗಳನ್ನು ಜಗತ್ತಿನ ಎಲ್ಲರೂ ಅಳವಡಿಸಿಕೊಳ್ಳುತ್ತಿದ್ದಾರೆ. ಇಡೀ ಜಗತ್ತು ಇಂದು ಭಾರತದತ್ತ ನೋಡುತ್ತಿದೆ. ಪುರಾತನ ವೈದ್ಯ ಪದ್ಧತಿಯನ್ನು ಬೆಳಕಿಗೆ ತರುವ ಅಗತ್ಯವಿದೆ ಎಂದು ರವಿಶಂಕರ್ ಗುರೂಜಿ ಹೇಳಿದರು.
ಎಲ್ಲರಿಗೂ ಆರೋಗ್ಯ
ರಾಜ್ಯದ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಆರೋಗ್ಯ ಸೌಲಭ್ಯ ಸಿಗಬೇಕು. ಅಂತಹ ವ್ಯವಸ್ಥೆ ಜಾರಿಯಾಗಬೇಕು. ಆರೋಗ್ಯ ಸೌಲಭ್ಯಗಳು ಕೇವಲ ಮೇಲ್ವರ್ಗದ ಸ್ವತ್ತಾಗಬಾರದು ಎಂದರು.
ಈ ಪಾರಂಪರಿಕ ಆರೋಗ್ಯ ಕಾರ್ಯಾಗಾರದಲ್ಲಿ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಆರೋಗ್ಯ ರಾಯಭಾರಿಗಳು ಪಾಲ್ಗೊಂಡಿದ್ದು, 2 ದಿನ ಈ ಕಾರ್ಯಾಗಾರ ನಡೆಯಲಿದೆ.
ಈ ಕಾರ್ಯಾಗಾರದ ಅಂಗವಾಗಿ ಅರಮನೆ ಮೈದಾನದಲ್ಲಿ ಇಂದಿನಿಂದ 13ರ ವರೆಗೆ ಆರೋಗ್ಯ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕರ್ನಾಟಕ
Comments are closed.