
ಮಂಗಳೂರು, ಸೆ.10: ವಳಚ್ಚಿಲ್ ನಲ್ಲಿರುವ ಶ್ರೀನಿವಾಸ ಶಿಕ್ಷಣ ಸಂಸ್ಥೆಯ ಆಡಳಿತಾ ಮಂಡಳಿಯು ಕೆಲವು ವಿದ್ಯಾರ್ಥಿಗಳ ಮೇಲೆ ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡುತ್ತಿದೆ. ಈ ಬಗ್ಗೆ ಪ್ರಶ್ನಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ದೂರು ನೀಡಿ ವಿದ್ಯಾರ್ಥಿಗಳ ಬಂಧನಕ್ಕೆ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಘಟಕದ ನೇತೃತ್ವದಲ್ಲಿ ವಿರುದ್ಧ ಶನಿವಾರ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶ್ರೀನಿವಾಸ ಶಿಕ್ಷಣ ಸಂಸ್ಥೆಯು ನೀಡಿರುವ ಸುಳ್ಳು ದೂರನ್ನು ಪರಿಗಣಿಸಿ ಪೊಲೀಸರು ಕೆಲ ಅಮಾಯಕ ವಿದ್ಯಾರ್ಥಿಗಳನ್ನಿ ಠಾಣೆಗೆ ಕರೆದೊಯ್ದಿದ್ದಾರೆ. ಅವರನ್ನು ಕೂಡಲೇ ಬಿಡುಗಡೆ ಮಾಡ ಬೇಕೆಂದು ಆಗ್ರಹಿಸಿ ಸಿಎಫ್‌ಐನ ಜಿಲ್ಲಾಧ್ಯಕ್ಷ ಮುಹಮ್ಮದ್ ಅಥಾವುಲ್ಲಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಪೊಲೀಸರು ಲಾಠಿ ಬೀಸಿ ಮುತ್ತಿಗೆ ಯತ್ನವನ್ನು ವಿಫಲಗೊಳಿಸಿ ಪ್ರತಿಭಟನ ಕಾರರನ್ನು ಚದುರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿಭಟನಕಾರರು ಈ ಬಗ್ಗೆ ಅಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ಎಸಿಪಿಗಳಾದ ತಿಲಕ್ ಚಂದ್ರ ಹಾಗೂ ಉದಯ ನಾಯಕ್ ಅವರು ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿದರು.

ಶ್ರೀನಿವಾಸ ಶಿಕ್ಷಣ ಸಂಸ್ಥೆಯ ಬಿ ಫಾರ್ಮಾ ವಿಭಾಗದ 4ನೆ ವರ್ಷದ ಕೆಲ ವಿದ್ಯಾರ್ಥಿಗಳ ಮೇಲೆ ಕಿರುಕುಳ ನೀಡಿದ್ದಾರೆಂಬ ಸುಳ್ಳು ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಶ್ರೀನಿವಾಸ್ ಕಾಲೇಜಿನ ಬಿ ಫಾರ್ಮಾದ ಪ್ರಥಮ ವರ್ಷದ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳ ಮೇಲೆ ಬಿ ಫಾರ್ಮಾದ 4ನೆ ವರ್ಷದ 23 ಮಂದಿ ವಿದ್ಯಾರ್ಥಿಗಳು ಕಿರುಕುಳ ನೀಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎ.ಆರ್. ಶಭರಾಯ ಅವರು ಸೆ. 3ರಂದು ದೂರು ನೀಡಿದ್ದಾರೆ.
ಆದರೆ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಅನ್ಯೋನ್ಯವಾಗಿದ್ದಾರೆ. ಇತ್ತೀಚೆಗೆ ಕಾಲೇಜಿನ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ನಿರ್ಬಂಧ ಹೇರಿರುವುದು ಹಾಗೂ ಕ್ಷುಲ್ಲಕ ಕಾರಣಗಳಿಗೆ ವಿದ್ಯಾರ್ಥಿಗಳಿಗೆ ಸಾವಿರಾರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಪ್ರಥಮ ವರ್ಷದ ಕೆಲ ವಿದ್ಯಾರ್ಥಿಗಳನ್ನು ಸ್ಟಾಫ್ ರೂಂಗೆ ಕರೆದು ಖುದ್ದು ಕಾಲೇಜಿನ ಪ್ರಾಂಶುಪಾಲರು ಹಾಗೂ ಇತರ ಕೆಲ ಪ್ರಾಧ್ಯಾಪಕರು ದೂರು ದಾಖಲಿಸುವಂತೆ ಒತ್ತಡ ಹೇರಿದ್ದಾರೆ.
ವಿದ್ಯಾರ್ಥಿಗಳು ದೂರು ನೀಡಲು ನಿರಾಕರಿಸಿದಾಗ ವೈಯಕ್ತಿಕ ಅಂಕ ಕಡಿತಗೊಳಿಸುವುದು, ಪರೀಕ್ಷೆಯಲ್ಲಿ ಅನುತ್ತೀಣಗೊಳಿಸುವ ಹಾಗೂ ಕಾಲೇಜಿನಿಂದ ಹೊರ ಹಾಕುವ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರಥಮ ವರ್ಷದ ಕೆಲ ವಿದ್ಯಾರ್ಥಿಗಳು ದೂರು ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಕೇರಳ ಮೂಲದ ಅಮಾಯಕ ವಿದ್ಯಾರ್ಥಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದೀಗ ಅಮಾಯಕ ವಿದ್ಯಾರ್ಥಿಯ ಬಂಧನದಿಂದ ಪಶ್ಚಾತ್ತಾಪಗೊಂಡಿರುವ ದೂರು ನೀಡಿದ ಪ್ರಥಮ ವರ್ಷದ ವಿದ್ಯಾರ್ಥಿಗಳು ನೀಡಿರುವ ದೂರನ್ನು ಹಿಂಪಡೆಯಲು ಮುಂದಾಗಿದ್ದಾರೆ ಎಂದು ಈ ಮನವಿಯಲ್ಲಿ ತಿಳಿಸಲಾಗಿದೆ.
ಅಮಾಯಕ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಬೇಕು ಹಾಗೂ ವಿದ್ಯಾರ್ಥಿಗಳ ವಿರುದ್ಧ ದ್ವೇಷ ಸಾಧಿಸುತ್ತಿರುವ ಪ್ರಾಂಶುಪಾಲ ಹಾಗೂ ಮೂವರು ಪ್ರಾಧ್ಯಾಪಕರನ್ನು ಕಾಲೇಜಿನಿಂದ ಅಮಾನತುಗೊಳಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಅವರ ಶಿಕ್ಷಣಕ್ಷೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
Comments are closed.