ಕರಾವಳಿ

ನಾಪತ್ತೆಯಾಗಿದ್ದ ಎಂಬಿಎ ವಿದ್ಯಾರ್ಥಿ ಶವ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

Pinterest LinkedIn Tumblr

sonu_subhas_chandra

ಮಂಗಳೂರು: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕೋಟೆಕಾರು ಬೀರಿ ಅಲೋಷಿಯಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿ ಸೋನು ಸುಭಾಶ್ ಚಂದ್ರನ್ (22) ಶವ ಶುಕ್ರವಾರ ಬೈಕ್ ಸಹಿತಾ ಮಾಡೂರು ಸಮೀಪ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೋಟೆಕಾರು ಬೀರಿಯಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿಯಾಗಿರುವ ಕೇರಳ ಮೂಲದ ಸೋನು ಸುಭಾಶ್ ಚಂದ್ರನ್ ಸೆಪ್ಟಂಬರ್ ೧ರಂದು ರಾತ್ರಿ ತಾನಿದ್ದ ಪೇಯಿಂಗ್ ಗೆಸ್ಟ್ ನಿಂದ ತನ್ನ ಯಮಹಾ (ಸಂಖ್ಯೆ ಕೆಎಲ್ 16 ಹೆಚ್ 8682) ಬೈಕ್‍ನಲ್ಲಿ ಹೊರಟವ ಬಳಿಕ ನಾಪತ್ತೆಯಾಗಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೂಮಿನಲ್ಲಿ ಜತೆಗಿದ್ದ ಸಹಪಾಠಿಗಳು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

sonu_subhas_chandra2

ಆನಂತರ ಪೊಲೀಸರು, ಸಹಪಾಠಿಗಳು ಹಾಗೂ ಸಂಬಂಧಿಕರು ಸೇರಿಕೊಂಡು 9 ದಿನಗಳ ಕಾಲ ಹುಡುಕಾಟ ನಡೆಸಿದರೂ ಸೋನು ಎಲ್ಲಿಯೂ ಕಂಡುಬಂದಿರಲಿಲ್ಲ. ಇದೀಗ ಈತ ಶವವಾಗಿ ಪತ್ತೆಯಾಗಿದ್ದು,ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸೆ.1 ರ ರಾತ್ರಿ ರೂಮಿನಲ್ಲಿ ಪಾರ್ಟಿ ನಡೆಸಿದ್ದ ಬಳಿಕ ಸ್ವಲ್ಪ ಕಾಲ ಒಂಟಿಯಾಗಿ ಇರಬೇಕೆಂದು ರೂಮಿನಲ್ಲಿದ್ದ ಇತರ ಸ್ನೇಹಿತರೊಡನೆ ತಿಳಿಸಿದ್ದ. ಆ ನಂತರ ಬೈಕಿನೊಂದಿಗೆ ಮಡ್ಯಾರ್ ಕಡೆಗೆ ತೆರಳಿ ಅಲ್ಲಿದ್ದ ಕಟ್ಟೆಯೊಂದರಲ್ಲಿ ತುಂಬಾ ಹೊತ್ತು ಕುಳಿತಿದ್ದ. ಮೊಬೈಲನ್ನು ರೂಮಿನಲ್ಲೇ ಬಿಟ್ಟು ಹೋಗಿದ್ದರಿಂದಾಗಿ ತುಂಬಾ ಹೊತ್ತಾದರೂ ಸೋನು ರೂಮಿಗೆ ಬಾರದೇ ಇದ್ದಾಗ ಆತನನ್ನು ಹುಡುಕುತ್ತಾ ಸ್ನೇಹಿತರು ಮಡ್ಯಾರು ಕಡೆಗೆ ಬಂದಿದ್ದರು.

ಆದರೆ ಅದೇ ಸಮಯದಲ್ಲಿ ಅಮಿತ ವೇಗದಲ್ಲಿ ಸೋನು ಮತ್ತೆ ಕೋಟೆಕಾರು ಬೀರಿ ಕಡೆಯತ್ತ ಬೈಕಿನಲ್ಲಿ ತೆರಳಿದ್ದನು. ಕೂಡಲೇ ಇನ್ನೊಂದು ಬೈಕಿನಲ್ಲಿ ಸ್ನೇಹಿತರು ಆತನನ್ನು ಹಿಂಬಾಲಿಸುತ್ತಾ ತೆರಳಿ ಬೀರಿ ಕಡೆಗೆ ಹೋದರೂ, ಸೋನು ಪತ್ತೆಯಾಗಿರಲಿಲ್ಲ. ಆ ನಂತರ ಸ್ನೇಹಿತರು, ಮನೆಮಂದಿಯಲ್ಲಿ ವಿಚಾರಿಸಿದ್ದರೂ ಪತ್ತೆಯಾಗಿರಲಿಲ್ಲ.

ಅಮಿತ ವೇಗದಲ್ಲಿ ತೆರಳಿದ್ದ ಸೋನು ಸುಭಾಷ್ ಚಂದ್ರ ಮಾಡೂರು ಸಮೀಪದ ತಿರುವು ರಸ್ತೆಯನ್ನು ಗಮನಿಸದೆ ನೇರವಾಗಿ ತೆರಳಿರುವುದರಿಂದ ಅಪಘಾತ ನಡೆದಿರುವ ಸಾಧ್ಯತೆಗಳಿವೆ. ಬೈಕ್ ನೇರ ತೋಡಿಗೆ ಉರುಳಿ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಅಲ್ಲೇ ಮೃತಪಟ್ಟಿರುವ ಶಂಕೆ ಇದೆ. ತಡರಾತ್ರಿ ಘಟನೆ ಸಂಭವಿಸಿ, ಹಾಗೂ ಆತ ಬಿದ್ದ ಜಾಗದಲ್ಲಿ ಗಿಡಗಂಟೆಗಳು ಆವರಿಸಿದ್ದರಿಂದಾಗಿ 9 ದಿನಗಳಾದರೂ ಮೃತದೇಹ ಯಾರ ಗೋಜಿಗೂ ಬಂದಿರಲಿಲ್ಲ. ಅಲ್ಲದೇ ಘಟನೆ ನಡೆದ ಸ್ಥಳದಲ್ಲೇ ಕಸದ ರಾಶಿ ತುಂಬಿ ಅದರಿಂದ ದುರ್ವಾಸನೆ ಬರುತ್ತಿದ್ದರಿಂದಾಗಿ ಮೃತದೇಹ ಕೊಳೆತು ದುರ್ವಾಸನೆ ಬೀರುತ್ತಿದ್ದರೂ ದಿನದಲ್ಲಿ ಸಂಚರಿಸುವ ನೂರಾರು ವಾಹನ ಸವಾರರಿಗೆ ಬೈಕಾಗಲಿ, ಮೃತದೇಹವಾಗಲಿ ಕಂಡುಬಂದಿರಲಿಲ್ಲ.

ಮಾಡೂರು ಸಮೀಪ ಆಡು ಸಾಕುತ್ತಿರುವ ಇಸ್ಮಾಯಿಲ್ ಎಂಬವರು ಸಂಜೆ ವೇಳೆ ಆಡು ಮೇಯಿಸುವ ಸಂದರ್ಭ ತೋಡಿನಲ್ಲಿ ಬೈಕ್ ಪತ್ತೆಯಾಗಿತ್ತು. ಗಿಡಗಂಟೆಗಳನ್ನು ತೆರೆದು ಮತ್ತೆ ನೋಡಿದಾಗ ವಿದ್ಯಾರ್ಥಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಎಸಿಪಿ ಶೃತಿ, ಉಳ್ಳಾಲ ಠಾಣಾಧಿಕಾರಿ ಶಿವಪ್ರಕಾಶ್, ಕೊಣಾಜೆ ಠಾಣಾಧಿಕಾರಿ ಅಶೋಕ್ ಸಹಿತ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.