ಹೊಸದಿಲ್ಲಿ, ಸೆ.10: ಕೇವಲ ಘೋಷಣೆಯಿಂದ ಗೋ ರಕ್ಷಣೆಯಾಗದು; ಗೋ ಸಂರಕ್ಷಣೆ ಹೆಸರಿನಲ್ಲಿ ಭೀತಿ ಹುಟ್ಟಿಸುವ ಭಯೋತ್ಪಾದನಾ ಕೃತ್ಯ ನಿಲ್ಲಬೇಕು ಎಂದು ಯೋಗ ಗುರು, ಉದ್ಯಮಿ ಬಾಬಾ ರಾಮದೇವ್ ಹೇಳಿದ್ದಾರೆ.
ಹೀಗೆ ಆಗಬೇಕಾದರೆ, ಹಸು ಧರ್ಮವನ್ನು ಮೀರಿದ್ದು ಎಂಬ ಭಾವನೆ ಜನರಲ್ಲಿ ಬಲಗೊಳ್ಳಬೇಕು. ಹಸು, ಗೀತೆ, ವೇದ, ರಾಮ ಹಾಗೂ ಕೃಷ್ಣ, ವಿಶ್ವದಲ್ಲಿ ಧರ್ಮ ಹುಟ್ಟಿಕೊಳ್ಳುವ ಮೊದಲೇ ಇದ್ದ ಪರಿಕಲ್ಪನೆ. ಯಾವ ಧರ್ಮಕ್ಕೂ 2,500 ವರ್ಷಕ್ಕಿಂತ ಹೆಚ್ಚಿನ ಇತಿಹಾಸ ಇಲ್ಲ. ಆದ್ದರಿಂದ ಜನ ಇಂಥ ಐಕಾನ್ಗಳನ್ನು ಯಾವುದೇ ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಅವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
“ಗೋಸಂರಕ್ಷಣೆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಕೆಲ ಮಂದಿಯೂ ಇದ್ದಾರೆ. ಅವರನ್ನು ಉತ್ತೇಜಿಸಬೇಕು.
ತೀರ್ಥಯಾತ್ರೆ ಹಾಗೂ ಹಜ್ಯಾತ್ರೆ ಮೇಲೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವುದಾದರೆ ಗೋಸಂರಕ್ಷಣೆ ಬಗ್ಗೆ ಏಕೆ ಮಾಡಬಾರದು” ಎಂದು ಅವರು ಪ್ರಶ್ನಿಸಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಗೋಶಾಲೆ ನೀತಿ ಜಾರಿಗೆ ಬಂದು ಈ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡಬೇಕು. ನಾವು ಅದನ್ನು ಮಾಡುತ್ತಿದ್ದು, ಇದಕ್ಕಾಗಿ 500 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಿದ್ದಾಗಿ ಪ್ರಕಟಿಸಿದರು.
ರಾಜಕೀಯದಲ್ಲಿ ಆಸಕ್ತಿ ಇಲ್ಲ:
ಯಾವುದೇ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೋದಿ ಕಾರ್ಯಶೈಲಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಅವರು, ರೇಟಿಂಗ್ ನೀಡುವುದನ್ನು ನಿಲ್ಲಿಸಿದ್ದೇನೆ. ಏಕೆಂದರೆ ಅದು ವಿವಾದಕ್ಕೆ ಕಾರಣವಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

Comments are closed.