
ಬೆಂಗಳೂರು: ನೀವು ಬದುಕಿ, ಬೇರೆಯವರನ್ನು ಬದುಕಲು ಬಿಡಿ ಎಂದು ಕಾವೇರಿ ಜಲ ವಿವಾದದ ಸಂಬಂಧ ಸುಪ್ರೀಂಕೋರ್ಟ್ ಕಳೆದ ಶುಕ್ರವಾರ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರ್ಕಾರ ನಾಳೆ ಸುಪ್ರೀಂಕೋರ್ಟ್ ಮುಂದೆ ರಾಜ್ಯದ ಕಾವೇರಿ ಜಲ ಪರಿಸ್ಥಿತಿ ಬಗ್ಗೆ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಲು ಸಿದ್ದತೆ ಮಾಡಿಕೊಂಡಿದೆ.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ರಾಜ್ಯದ ಪರ ವಾದ ಮಾಡುವ ಹಿರಿಯ ವಕೀಲ ಪಾಲಿ ಎಸ್. ನಾರಿಮನ್ ಅವರೊಂದಿಗೆ ನವದೆಹಲಿಯಲ್ಲಿ ಕಾವೇರಿ ಜಲ ವಿವಾದದ ಸಂಬಂಧ ಚರ್ಚೆ ನಡೆಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಸುಪ್ರೀಂಕೋರ್ಟ್‍ಗೆ ಮನವರಿಕೆ ಮಾಡಿಕೊಡಬೇಕೆಂದು ಸೂಚನೆ ನೀಡಿದ್ದಾರೆ.
ದಶಕಗಳಿಂದ ಎರಡೂ ರಾಜ್ಯಗಳು ಹೋರಾಟ ನಡೆಸುತ್ತಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ನಾಳೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಲಲಿತ್ ಉದಯ್ ಅವರ ಪೀಠದಲ್ಲಿ ವಿಚಾರಣೆ ಮುಂದುವರೆ ಯಲಿದ್ದು, ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬ ಬಗ್ಗೆ ಎರಡೂ ರಾಜ್ಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನೀರು ಬಿಡುವ ಅನಿವಾರ್ಯತೆಯನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ. ಆದರೆ ರಾಜ್ಯದಲ್ಲಿ ನೀರಿಲ್ಲದೆ ಸಂಕಷ್ಟ ಪರಿಸ್ಥಿತಿ ಎದುರಾಗಿದ್ದು, ಈ ಪರಿಸ್ಥಿತಿಯನ್ನು ಸಮರ್ಪಕವಾಗಿ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಲು ರಾಜ್ಯದ ಪರ ವಕೀಲರಾದ ಎಸ್.ಪಾಲಿ ನಾರಿಮನ್ ತಂಡ ಸಿದ್ದವಾಗಿದೆ.
ಮೊನ್ನೆ ಕಳೆದ ಶುಕ್ರವಾರ ನೀವು ಬದುಕಿ, ಬದುಕಲು ಬಿಡಿ ಎಂದು ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸದ್ಯ ಕಾವೇರಿ ಜಲಾಶಯಗಳಾದ ಕಬಿನಿ, ಕೆಆರ್‍ಎಸ್, ಹಾರಂಗಿ, ಹೇಮಾವತಿಗಳಲ್ಲಿ ನೀರಿಲ್ಲ. 51 ಟಿಎಂಸಿ ನೀರು ಮಾತ್ರ ಜಲಾಶಯಗಳಲ್ಲಿ ನೀರಿನ ಸಂಗ್ರಹವಿದೆ. ಈ ನೀರಿನಲ್ಲಿ 40 ಟಿಎಂಸಿ ಅಡಿ ನೀರು ಕುಡಿಯುವ ನೀರಿಗೆ ಬೇಕಾಗುತ್ತದೆ. ಉಳಿದ ನೀರು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬೆಳೆದು ನಿಂತ ಬೆಳೆಗಳಿಗೆ ಬೇಕಾಗುತ್ತದೆ. ಈ ಭಾಗದಲ್ಲಿ ಉತ್ತಮ ಮಳೆಯಾಗದ ಕಾರಣ ಜಲಾಶಯಗಳಲ್ಲಿ ನೀರಿಲ್ಲದಿರುವುದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಮಾಸಿಕ ಸೂತ್ರದಂತೆ ತಮಿಳುನಾಡಿಗೆ ನೀರು ಬಿಡಲಾಗಿದೆ.
ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ತಮಿಳುನಾಡು ಸರ್ಕಾರ ಅಲ್ಲಿ ಸಾಂಬಾ ಬೆಳೆಗೆ ನೀರು ಕೇಳಿದೆ. ಅಲ್ಲಿನ ಮೆಟ್ಟೂರು ಜಲಾಶಯದಲ್ಲಿ 34 ಟಿಎಂಸಿ ನೀರಿದೆ. ಅಲ್ಲಿ ಈಗ ಮಳೆ ಪ್ರಾರಂಭವಾಗಿದೆ. ನಮ್ಮಲ್ಲಿ ಮುಂಗಾರು ಮುಗಿದಿದ್ದು , ನಿಗದಿತ ಪ್ರಮಾಣದ ಮಳೆಯಾಗಿಲ್ಲ. ಈ ಸಂದರ್ಭದಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ನೀರನ್ನು ಬಿಡಲಾಗುವುದು ಎಂದು ವಕೀಲರು ವಾದ ಮಂಡಿಸಲಿದ್ದಾರೆ. ಈ ಬಗ್ಗೆ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಾರಿಮನ್ ಅವರೊಂದಿಗೆ ನವದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ.
ತಮಿಳುನಾಡು ವಾದವೇನು:
ಕಾವೇರಿ ನ್ಯಾಯಾಧೀಕರಣ ನಿಗದಿಪಡಿಸಿರುವ ನೀರು ಹಂಚಿಕೆ ಸೂತ್ರದಂತೆ ಕರ್ನಾಟಕ ರಾಜ್ಯ ನೀರನ್ನು ಹರಿಸಿಲ್ಲ. ಮಾಸಿಕ ಸೂತ್ರದಂತೆ ನಮಗೆ ಇನ್ನು 25 ಟಿಎಂಸಿ ನೀರು ಬರಬೇಕು, ಕರ್ನಾಟಕ ಸರ್ಕಾರ ನೀರು ಬಿಟ್ಟಿಲ್ಲ. ಇದರಿಂದ ನಮ್ಮ ಸಾಂಬಾ ಬೆಳೆ ಹಾಳಾಗಿದೆ. ನೀರಿನ ಕೊರತೆಯಿಂದ ಇಲ್ಲಿನ ರೈತರಿಗೆ 2,250 ಕೋಟಿ ನಷ್ಟವುಂಟಾಗಿದ್ದು, ಪರಿಹಾರವನ್ನು ಕೊಡಿಸಬೇಕೆಂದು ಕೋರಿದೆ.
Comments are closed.