
ಮಂಗಳೂರು, ಆ.20: ದೇವರಾಜ ಅರಸು ಅವರ ಕಾಲದಲ್ಲಿ ಅತಿ ಹೆಚ್ಚು ಲಾಭ ಸಿಕ್ಕಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ, ದೇವರಾಜ ಅರಸು ಅವರು ಭೂಮಸೂದೆ ಕಾನೂನು ಜಾರಿಗೆ ತಂದ ದಿಟ್ಟತನವನ್ನು ನಾವು ಮರೆಯುವಂತಿಲ್ಲ. ಅದೇ ರೀತಿ ದುರ್ಬಲ ವರ್ಗದವರ ಪರ ಕೆಲಸ ಮಾಡಿದವರು ದೇವರಾಜ ಅರಸು ಎಂಬುದನ್ನು ಕೂಡ ನಾವು ನೆನಪಿಸ ಬೇಕಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು.
ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನದ ಪ್ರಯುಕ್ತ ಶನಿವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಮತ್ತು ದೇವರಾಜ್ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಹಿಂದುಳಿದ ವರ್ಗದ ಹಿಂದೂಗಳಿಗೆ ಕಾಂಗ್ರೆಸ್ ಪಕ್ಷದಿಂದ ಬಹಳಷ್ಟು ಲಾಭವಾಗಿದೆ. ಆದರೆ ಅದನ್ನು ಮರೆಮಾಚಲಾಗುತ್ತಿದೆ. ಜನರನ್ನು ಮತೀಯ ಕಾರಣದಿಂದ ವಿಭಜಿಸುವ ಪ್ರಯತ್ನ ಆಗುತ್ತಿದೆ. ಸಂಘಪರಿವಾರ ಇವತ್ತು ಹಿಂದುಳಿದ ವರ್ಗದವರ ಮನಸ್ಸನ್ನು ಹಾಳು ಮಾಡಿದೆ. ಅಲ್ಪಸಂಖ್ಯಾತರ, ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದವರು ಇದೀಗ ಹಿಂದುಳಿದ ವರ್ಗದವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ರೈ ಆರೋಪಿಸಿದರು.

ಕಾಂಗ್ರೆಸ್ ಹಂಗಾಮಿ ಜಿಲ್ಲಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಸುಧೀರ್ ಟಿ.ಕೆ., ನಝೀರ್ ಬಜಾಲ್, ಪದ್ಮನಾಭ ನರಿಂಗಾನ, ಎಂ.ಎಚ್ ಅಶ್ರಫ್, ಸಂತೋಷ್ ಶೆಟ್ಟಿ, ಫಾರುಕ್ ಉಳ್ಳಾಲ, ಮೋಹನ್ ಮೆಂಡನ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments are closed.