ಬೆಂಗಳೂರು, ಆ. ೧೭ – ಕೆರೆ ಹಾಗೂ ರಾಜಕಾಲುವೆ ಒತ್ತುವರಿದಾರರ ವಿರುದ್ಧ ಬಿಬಿಎಂಪಿ ಕೈಗೊಂಡಿರುವ ಕಾರ್ಯಾಚರಣೆ ಮುಂದುವರಿದಿದ್ದು, ಇಂದು ನಗರದ ರಾಜರಾಜೇಶ್ವರಿನಗರ ವಲಯ, ಮಹದೇವಪುರ ವಲಯ ಹಾಗೂ ಯಲಹಂಕದ ದೊಡ್ಡಬೊಮ್ಮಸಂದ್ರದಲ್ಲಿ ತೆರವು ಕಾರ್ಯ ನಡೆದಿದೆ.
ರಾಜರಾಜೇಶ್ವರಿ ನಗರ ವಲಯದ ಪಂಚಶೀಲ ನಗರ ಹಲಗೆ ವಡೇರಹಳ್ಳಿ ಬಡಾವಣೆಯಲ್ಲಿ ಕಟ್ಟಲಾಗಿರುವ ಸುಮಾರು ೧೫ಕ್ಕೂ ಹೆಚ್ಚು ಮನೆಗಳು ನೆಲಸಮಗೊಳ್ಳುವ ಭೀತಿಯಲ್ಲಿದ್ದು, ಮನೆ ಮಾಲೀಕರು ತಾವೇ ಸ್ವಇಚ್ಛೆಯಿಂದ ಕಟ್ಟಡಗಳ ತೆರವಿಗೆ ಮುಂದಾಗಿದ್ದಾರೆ.
ರಾಜಕಾಲುವೆಯ ಮೇಲೆ ಕಟ್ಟಲಾಗಿರುವ ಮನೆಗಳಲ್ಲಿ ಬೆಮಲ್ ನಿರ್ದೇಶಕರು, ನಿವೃತ್ತ ಉಪ ತಹಶೀಲ್ದಾರ್ ಹಾಗೂ ಬಡವರ ಮನೆಗಳೂ ಇದ್ದು, ಈಗಾಗಲೇ ಬೆಳಿಗ್ಗೆಯಿಂದಲೇ ತಮ್ಮ ಸ್ವಂತ ಖರ್ಚಿನಿಂದ ಕಟ್ಟಡಗಳನ್ನು ಒಡೆಸಿ ಹಾಕುವ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂತು.
ಬೆಮಲ್ ಬಡಾವಣೆ ನಿರ್ಮಾಣದಲ್ಲಿ ಶ್ರಮಿಸಿದ ಕೂಲಿ ಕಾರ್ಮಿಕರ ೧೨ ಮನೆಗಳು ಭಾಗಶಃ ನೆಲಸಮಗೊಳ್ಳಲಿದ್ದು, ಈ ಜನರು ಮುಂದೇನು ಎಂಬ ಚಿಂತೆಯಲ್ಲಿ ತೊಡಗಿದ್ದಾರೆ.
ಬೆಮಲ್ ಲೇಔಟ್‌ನಲ್ಲಿ ಕೇವಲ ೪ ತಿಂಗಳ ಹಿಂದೆಯಷ್ಟೇ ಗೃಹ ಪ್ರವೇಶವಾಗಿರುವ ಸಮಾರಂಭ ನಡೆದಿರುವ ೨ ಅಂತಸ್ತಿನ ಮನೆಯ ಭಾಗಶಃ ಕಟ್ಟಡವನ್ನು ಒಡೆದು ಹಾಕಲಾಗುತ್ತಿದೆ. ಮೊದಲೇ ಗೊತ್ತಿದ್ದರೆ ಮನೆಯನ್ನೇ ಕಟ್ಟುತ್ತಿರಲಿಲ್ಲ ಎಂದು ಮನೆ ಮಾಲೀಕರ ಮಗ ಅಮರನಾಥ್ ಬೇಸರದಿಂದಲೇ ಹೇಳುತ್ತಾರೆ.
ಹಲಗೆ ವಡೇರಹಳ್ಳಿಯಲ್ಲಿ ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗೇಗೌಡ ಹಾಗೂ ನಟರಾಜ್ ಎಂಬುವರ ಎರಡೂ ಮನೆಗಳು ೬ ಮೀಟರ್‌ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಕೆಡವಿ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜೆಸಿಬಿಗಳು ಬಂದಲ್ಲಿ ಮನೆ ಹಾಳಾಗಲಿದೆ ಎಂದು ತಾವೇ ಖುದ್ದು ಲಕ್ಷಾಂತರ ರೂ. ವೆಚ್ಚದಲ್ಲಿ ಸ್ವಯಂ ಪ್ರೇರಣೆಯಿಂದ ನಾವೇ ಕಟ್ಟಿದ ಮನೆಯನ್ನು ಒಡೆದು ಹಾಕುತ್ತಿದ್ದೇವೆ ಎಂದು ಮಹಾಲಿಂಗೇಗೌಡ ಕಣ್ಣೀರು ಸುರಿಸುತ್ತಲೇ ಹೇಳಿದರು.
೨೦೦೧ರ ವೇಳೆಯಲ್ಲಿ ಮನೆ ಕಟ್ಟಿಕೊಂಡೆವು. ೫ ಮೀಟರ್ ನಂತರ ೨ ಅನಂತರ ೪ ಈಗ ೬ ಮೀಟರ್ ಒತ್ತುವರಿ ಮಾಡಿಕೊಂಡಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಅವೈಜ್ಞಾನಿಕ ಸರ್ವೆ ಮಾಡಿದ್ದಾರೆ. ಇಲ್ಲಿ ರಾಜಕಾಲುವೆ ಇದೆ ಎಂಬುದು ಗೊತ್ತೇ ಇರಲಿಲ್ಲ. ೫೦ ಲಕ್ಷ ರೂ.ಗಳ ಸಾಲ ಇದೆ. ಬಿಬಿಎಂಪಿ ನಗರ ಯೋಜನೆ ಸರ್ವೆಯರ್ ಯಾವೊಬ್ಬ ಅಧಿಕಾರಿಗಳಿಗೂ ಪರಿಹಾರ ಏನು ಸಿಗುತ್ತಿದೆ ಎಂಬ ಮಾಹಿತಿ ಇಲ್ಲ ಎಂದು ಮನೆ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲೊಂದು ವೃದ್ಧಾಶ್ರಮ ಕೂಡ ಇದೆ. ಮನೆ ಒಡೆದಲ್ಲಿ ೪೦ ಮಂದಿ ವಯಸ್ಸಾದವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಾರೆ. ಹಲಗೆ ವಡೇರಹಳ್ಳಿಯಲ್ಲಿರುವ ಪದ್ಮಾವತಿ ಮತ್ತು ಮೀನಾಕ್ಷಿ ಕಲ್ಯಾಣ ಮಂಟಪ ಕೂಡ ರಾಜಕಾಲುವೆಯ ಪರಿದಿಯಲ್ಲೇ ಬರುತ್ತಿದ್ದು, ಅಲ್ಲೂ ಕೂಡ ಬಿಬಿಎಂಪಿ ಅಧಿಕಾರಿಗಳು ಸರ್ವೆ ನಡೆಸಿದ್ದಾರೆ.
ಬೆಮಲ್ ಲೇಔಟ್‌ನಲ್ಲಿ ಮನೆ ಕಟ್ಟಿದ ಕಾರ್ಮಿಕರೇ ಮನೆಯನ್ನು ಒಡೆದು ಹಾಕುತ್ತಿರುವುದು ವಿಶೇಷ. ಕಾರ್ಮಿಕರಿಗೂ ಮನೆ ಒಡೆಯುವುದಕ್ಕೆ ಬೇಸರವಿದೆ. ಆದರೆ, ಮಾಲೀಕರ ಆದೇಶದಂತೆ ಕಟ್ಟಿದ ಮನೆಯನ್ನೇ ಒಡೆದು ಹಾಕುತ್ತಿದ್ದೇವೆ ಎಂದು ಬೇಸರದಿಂದಲೇ ಹೇಳುತ್ತಾರೆ.
ಬೆಮಲ್ ಸೊಸೈಟಿಯಿಂದ ಸೈಟುಗಳನ್ನು ವಿತರಿಸಲಾಯಿತು. ತಂದೆ ವೈ.ಎನ್. ನರಸಿಂಹ ಮೂರ್ತಿ ಬೆಮಲ್‌ನಿಂದ ನಿವೃತ್ತರಾದ ನಂತರ ಬಂದ ಹಣದಿಂದ ಮನೆ ಕಟ್ಟಿದೆವು. ಈಗ ನಾಲ್ಕು ತಿಂಗಳ ಹಿಂದಷ್ಟೇ ಕಟ್ಟಿದ ಮನೆಯನ್ನು ಒಡೆದು ಹಾಕುವ ಪರಿಸ್ಥಿತಿ ಎದುರಾಗಿದೆ. ಲಕ್ಷಾಂತರ ರೂಪಾಯಿ ಸಾಲ ಇದೆ. ಮನೆ ಒಡೆಯುವುದಕ್ಕೂ ಲಕ್ಷಾಂತರ ರೂ. ಖರ್ಚಾಗಲಿದೆ ಎಂದು ಅಮರನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.
ಉದ್ಯಮಿ ಅರುಣಾಚಲಂ ಬೆಮಲ್ ಲೇಔಟ್ ನಿರ್ಮಾಣ ಸಂದರ್ಭದಲ್ಲಿ ಶ್ರಮಿಸಿದ ಕೂಲಿ ಕಾರ್ಮಿಕರಿಗೆ ಒಂದಷ್ಟು ನಿವೇಶನವನ್ನು ನೀಡಿದ್ದರು. ರಾಜಕಾಲುವೆ ಇದೆ ಎಂದು ಗೊತ್ತಿಲ್ಲದೆ ಕಾರ್ಮಿಕರು ೧೫x೧೫ ಅಳತೆಯ ನಿವೇಶನದಲ್ಲಿ ೧೨ ವರ್ಷಗಳ ಹಿಂದೆ ಮನೆ ಕಟ್ಟಿಕೊಂಡಿದ್ದೆವು. ಈಗ ೫ ಅಡಿಗಳಷ್ಟು ಮನೆಯ ಭಾಗವನ್ನು ನಾವೇ ಕೆಡವಿ ಹಾಕುತ್ತಿದ್ದೇವೆ ಎಂದು ಹೋಬಲೇಶ್ ಹೇಳುತ್ತಾರೆ.
ಈ ಭಾಗದಲ್ಲಿ ವಾಸ ಮಾಡುವವರು ಹೆಚ್ಚಾಗಿ ಗಾರೆ ಕೆಲಸದವರು. ಚಿಕ್ಕ ಮನೆಯೇ ಮತ್ತಷ್ಟು ಚಿಕ್ಕದಾದರೆ ಸಂಸಾರ ಕಟ್ಟಿಕೊಂಡು ಹೇಗೆ ಹೇಗುವುದು ಎಂದು ಮಹಿಳೆಯರು ಕಣ್ಣೀರು ಸುರಿಸುತ್ತಾರೆ.
ಮನೆ ಒಡೆದು ಹಾಕದಿದ್ದರೆ ನಾವೇ ಜೆಸಿಬಿ ತಂದು ಒಡೆದು ಹಾಕುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಬೆದರಿಕೆ ಹಾಕುವುದು ನಮಗೆ ಹೆದರಿಕೆ ಹುಟ್ಟಿಸುತ್ತವೆ ಎನ್ನುತ್ತಾರೆ.
ನಕ್ಷೆಯಂತೆ ತೆರವು ಕಾರ್ಯ
ಮಹದೇವಪುರ ವಲಯದ ಕ್ಯಾಲಸನಹಳ್ಳಿಯಲ್ಲಿ ಭೂಮಾಲೀಕರ ವಿರೋಧದ ಮಧ್ಯೆಯೂ ರಾಜಕಾಲುವೆ ತೆರವು ಕಾರ್ಯ ಮುಂದುವರೆದಿದೆ.
ರಾಂಪುರ ಕೆರೆಯಿಂದ ಮೂರು ಕಿ. ಮೀ. ಉದ್ದದ ಹಾಗೂ ೧೫ ಮೀಟರ್ ಅಗಲದ ರಾಜಕಾಲುವೆ ತೆರವು ಕಾರ್ಯ ಮುಂದುವರೆದಿದ್ದು, ಸರ್ವೆ ಕಾರ್ಯದಂತೆ ತೆರವು ಕಾರ್ಯವನ್ನು ಮುಂದುವರೆಸಿದ್ದಾರೆ.
ಈಗಾಗಲೇ ಮೂರು ಕಿ.ಮೀ. ರಾಜಕಾಲುವೆ ಒತ್ತುವರಿಯಲ್ಲಿ ಅರ್ಧದಷ್ಟು ಕಾಲುವೆ ಒತ್ತುವರಿ ತೆರವು ಮಾಡಲಾಗಿದೆ. ಸರ್ವೆ ಅಧಿಕಾರಿಗಳು ಬಂದ ನಂತರ ಸ್ಥಳೀಯ ಭೂಮಾಲೀಕರ ಹಾಗೂ ಭೂ ವೈಭವ್ ರೆಸಿಡೆನ್ಸಿಯಲ್ ಬಡಾವಣೆ ಸೇರಿದಂತೆ, ಇನ್ನಿತರ ಕಡೆ ನಕ್ಷೆಯಂತೆ ತೆರವು ಕಾರ್ಯ ಮಾಡಲಾಗುವುದೆಂದು ಮಹದೇವಪುರ ವಲಯದ ಜಂಟಿ ಆಯುಕ್ತ ಮುನಿವೀರಪ್ಪ ಅವರು ತಿಳಿಸಿದ್ದಾರೆ.
ಇನ್ನೂ ಒಂದೆರಡು ದಿನಗಳ ಕಾಲ ಈ ತೆರವು ಕಾರ್ಯಾಚರಣೆ ನಡೆಯಲಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಯಾವುದೇ ಒತ್ತಡಕ್ಕೆ ಅಥವಾ ಪ್ರಭಾವಕ್ಕೆ ಮಣಿಯದೆ, ಮುಖ್ಯಮಂತ್ರಿಗಳ ಆದೇಶದಂತೆ ತೆರವು ಮಾಡಲಾಗುವುದೆಂದು ತಿಳಿಸಿದರು.
ಸರ್ವೆಯರ್‌ಗೆ ಕಾದ ಜಂಟಿ ಆಯುಕ್ತ
ಜಂಟಿ ಆಯುಕ್ತರು ಬಂದು ಸ್ಥಳ ಪರಿಶೀಲನೆ ನಡೆಸಿದರೂ, ೧೦ ಗಂಟೆಗೆ ಬರಬೇಕಾಗಿದ್ದ ಸರ್ವೆಯರ್ ಒಂದು ಗಂಟೆಯಾದರೂ ಬರದೆ ಜಂಟಿ ಆಯುಕ್ತರನ್ನು ಕಾಯಿಸಿದ ಘಟನೆ ಕ್ಯಾಲಸನಹಳ್ಳಿಯಲ್ಲಿ ನಡೆದಿದೆ.
ಕ್ಯಾಲಸನಹಳ್ಳಿಯಲ್ಲಿ ರಾಜಕಾಲುವೆ ತೆರವು ಕಾರ್ಯ ಮಾಡಬೇಕಾಗಿತ್ತು. ಆದರೆ ನಿನ್ನೆ ಸಂಜೆ ರಾಜಕಾಲುವೆ ತೆರವಿಗೆ ಗುರುತು ಹಾಕಿ ಹೋಗಿದ್ದ ಸರ್ವೆಯರ್ ಮುಂದಿನ ತೆರವು ಕಾರ್ಯಾಚರಣೆಗೆ ಇಂದು ಬೆಳಿಗ್ಗೆ ಗುರುತು ಹಾಕಿಕೊಡಬೇಕಾಗಿತ್ತು. ಆದರೆ ಅವರು ಸ್ಥಳಕ್ಕಾಗಮಿಸದೆ, ತೆರವು ಕಾರ್ಯ ೨ ಗಂಟೆಗಳಿಗೂ ಹೆಚ್ಚು ಕಾಲ ಮಂದಗತಿಯಲ್ಲಿ ಸಾಗಿದೆ. ಜಂಟಿ ಆಯುಕ್ತರು ಬಂದು ೨ ತಾಸು ಕಾದರೂ, ಸರ್ವೆಯರ್ ಮಾತ್ರ ಆಗಮಿಸದೆ ಇರುವುದು ತೆರವು ಕಾರ್ಯಕ್ಕೆ ಹಿನ್ನಡೆಯಾಗಿದೆ.
ಎಂದಿನಂತೆ ಭೂ ಮಾಲೀಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಸರ್ವೆಯಂತೆ ಕೆಲಸ ಮಾಡುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡಬೊಮ್ಮಸಂದ್ರದಲ್ಲಿ ಇಂದು ಬೆಳಗ್ಗೆ ಜೆಸಿಬಿ ಯಂತ್ರಗಳು ಆರ್ಭಟಿಸಿದ್ದು, ಒಂದು ಮನೆ ನೆಲಸಮವಾದವು. ತಕ್ಷಣ ಎಲ್ಲಾ ನಿವಾಸಿಗಳು ಒಟ್ಟಾಗಿ ಕಾರ್ಯಾಚರಣೆಗೆ ತಡೆ ನೀಡಿದ್ದರಿಂದ ತೆರವು ಕಾರ್ಯ ಸ್ಥಗಿತಗೊಂಡಿತು. ಇಲ್ಲದ ರಾಜಕಾಲುವೆಯನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮನೆಗಳನ್ನು ಒಡೆಯಲಾಗುತ್ತಿದೆ. ಇದು ಅನ್ಯಾಯ, ಒಂದು ವೇಳೆ ಒತ್ತುವರಿಯಾಗಿದ್ದರೆ ನಾವೆ ತೆರವುಗೊಳಿಸುತ್ತೇವೆ. ಇಲ್ಲಿ ರಾಜಕಾಲುವೆ ಇಲ್ಲ, ಇಲ್ಲಿ ಮೋರಿಗಳು ಮಾತ್ರ ಇದ್ದವು. ಆದರೆ ಬಿಬಿಎಂಪಿ ಅಧಿಕಾರಿಗಳು ಮೋರಿಯನ್ನೇ ರಾಜಕಾಲುವೆ ಎಂದು ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
೭ ತಿಂಗಳ ಹಿಂದೆಯಷ್ಟೇ ಕಟ್ಟಿದ ವೆಂಕಟ್ ಅವರ ಮನೆಯ ಅರ್ಧಭಾಗವನ್ನು ತೆರವುಗೊಳಿಸಲಾಯಿತು. ಇದರಿಂದ ಅವರು ಮನೆಯ ಸಾಮಾನುಗಳನ್ನು ಬೀದಿಯಲ್ಲಿಟ್ಟು ಕುಳಿತಿರುವುದು ಕಂಡುಬಂತು. ಅದೇ ರೀತಿ ಬಾಡಿಗೆ ಮನೆಯಲ್ಲಿದ್ದ ಲಿಂಗರಾಜು ಎಂಬವರ ಮನೆಯನ್ನು ತೆರವುಗೊಳಿಸಿದ್ದರಿಂದ ಅವರು ಬೀದಿಯಲ್ಲಿ ಕುಳಿತಿರುವುದು ಕಂಡುಬಂತು.
Comments are closed.