ಇಸ್ಲಾಮಾಬಾದ್: ಜಮ್ಮು-ಕಾಶ್ಮೀರ ವಿವಾದ ಕುರಿತು ಮಾತುಕತೆಗೆ ಇಸ್ಲಾಮಾಬಾದ್ ಗೆ ಭೇಟಿ ನೀಡುವಂತೆ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಐಸಜ್ ಚೌಧರಿ ಸೋಮವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ.
ಪಾಕಿಸ್ತಾನದ ಭಾರತ ಹೈ ಕಮಿಷನರ್ ಅವರನ್ನು ಕರೆದು ಆಹ್ವಾನ ಪತ್ರವನ್ನು ಜೈಶಂಕರ್ ಅವರಿಗೆ ಚೌಧರಿ ಹಸ್ತಾಂತರಿಸಿದ್ದಾರೆ ಎಂದು ಪಾಕ್ ನ ವಿದೇಶಾಂಗ ಕಾರ್ಯಾಲಯ ತಿಳಿಸಿದೆ. ಪತ್ರದಲ್ಲಿ, ಜಮ್ಮು-ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಬಗೆಹರಿಸಲು ಎರಡೂ ದೇಶಗಳು ಹೊಂದಿರುವ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಒತ್ತಿ ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿಗಳು, ಭಾರತವನ್ನು ಔಪಚಾರಿಕವಾಗಿ ಮಾತುಕತೆಗೆ ಆಹ್ವಾನಿಸಲು ಪತ್ರ ಬರೆಯಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ನೀತಿ ಮುಖ್ಯಸ್ಥ ಸರ್ತಾಜ್ ಅಜೀಜ್ ಕಳೆದ ವಾರ ಘೋಷಿಸಿದ್ದರು. ಎರಡು ದೇಶಗಳ ಮಧ್ಯೆ ಸಂಘಟಿತ ಮಾತುಕತೆ ಪ್ರಕ್ರಿಯೆ ಸ್ಥಗಿತಗೊಂಡಿದ್ದರೂ ಕೂಡ ಪಾಕಿಸ್ತಾನ ಭಾರತವನ್ನು ಮಾತುಕತೆಗೆ ಆಹ್ವಾನಿಸುತ್ತದೆ ಎಂದು ಅವರು ಹೇಳಿದ್ದರು.
ಜಮ್ಮು-ಕಾಶ್ಮೀರದ ಒಡೆತನಕ್ಕೋಸ್ಕರ ಭಾರತ-ಪಾಕಿಸ್ತಾನ ಮಧ್ಯೆ ಸುದೀರ್ಘ ವಿವಾದವಿದೆ. ರಾಜ್ಯದ ಉತ್ತರ ದಿಕ್ಕಿನ ಮೂರನೇ ಒಂದು ಭಾಗ ಪಾಕಿಸ್ತಾನ ಹೊಂದಿದ್ದರೆ ದಕ್ಷಿಣದ ಮೂರನೇ ಎರಡು ಭಾಗವನ್ನು ಭಾರತ ಒಳಗೊಂಡಿದೆ. ಜಮ್ಮು-ಕಾಶ್ಮೀರದಲ್ಲಿ ಭಾರತದ ಆಡಳಿತವನ್ನು ಕೊನೆಗಾಣಿಸಬೇಕೆಂದು ಉಗ್ರಗಾಮಿಗಳಿಗೆ ಪ್ರೋತ್ಸಾಹ ನೀಡಿ ಅವರಿಗೆ ಶಸ್ತ್ರಾಸ್ತ್ರ ಪೂರೈಸಿ ಯುದ್ಧ ಮಾಡುವಂತೆ ಪಾಕಿಸ್ತಾನ ಪ್ರೋತ್ಸಾಹಿಸುತ್ತದೆ ಎಂದು ಭಾರತ ಆರೋಪಿಸುತ್ತಾ ಬಂದಿದೆ. ಆದರೆ ನೈತಿಕ ಮತ್ತು ರಾಜತಾಂತ್ರಿಕ ನೆರವು ಮಾತ್ರ ನೀಡುತ್ತಿದ್ದೇವೆ ಎಂಬುದು ಪಾಕಿಸ್ತಾನದ ವಾದ.
ಇತ್ತೀಚೆಗೆ ಜಮ್ಮು-ಕಾಶ್ಮೀರದ ಉಗ್ರಗಾಮಿ ಸ್ಥಳೀಯ ನಾಯಕ ಬುರ್ಹಾನ್ ವಾನಿಯ ಹತ್ಯೆಯ ನಂತರ ಭಾರತ-ಪಾಕ್ ಸಂಬಂಧ ತೀವ್ರ ಹದಗೆಟ್ಟು ಹಿಂಸಾಚಾರ ಭುಗಿಲೆದ್ದಿದೆ. ಇನ್ನು ಕಾಶ್ಮೀರದಲ್ಲಿ ಜುಲೈ 25ರಂದು ಭಾರತೀಯ ಅಧಿಕಾರಿಗಳು ಲಷ್ಕರ್-ಎ-ತಯ್ಬಾ ಉಗ್ರ ಬಹಾದುರ್ ಆಲಿಯನ್ನು ಬಂಧಿಸಿದ್ದರು.
Comments are closed.