ಜೈಪುರ: ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಮೊಮ್ಮಗ ತನ್ನ ಮನೆಯ ಮಹಡಿ ಮೇಲೆ ಪಾಕಿಸ್ತಾನಿ ಧ್ವಜ ಹಾರಿಸಿದ ಆರೋಪದ ಮೇರೆಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ರಾಜಸ್ತಾನದ ಜೈಪುರದ ಮಾನ್ಸರೋವರ ಎಂಬಲ್ಲಿ ಈ ಘಟನೆ ನಡೆದಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅನಿನ್ ಜೈಮಿನಿ ಎಂಬುವವರ ಮೊಮ್ಮಗ ಕಪಿಲ್ ಶಾಸ್ತ್ರಿ ತನ್ನ ಮನೆ ಮಹಡಿಯ ಮೇಲೆ ಪಾಕಿಸ್ತಾನ ಧ್ವಜವನ್ನು ಹಾರಿಸಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಪಾಕಿಸ್ತಾನ ಧ್ವಜ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕಪಿಲ್ ಶಾಸ್ತ್ರಿಯನ್ನು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಆತನ ಪೋಷಕರು ಕಪಿಲ್ ಶಾಸ್ತ್ರಿ ಓರ್ವ ಮಾನಸಿಕ ಅಸ್ವಸ್ಥ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಕಪಿಲ್ ಶಾಸ್ತ್ರಿ ಬಿಟ್ಟಿರುವ ಪೊಲೀಸರು ನಾಳೆ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದಾಗಿ ಹೇಳಿದ್ದಾರೆ.
ಅಂತೆಯೇ ಆತನ ವಿರುದ್ಧ ವಿವಿಧ ಧರ್ಮ, ಗುಂಪುಗಳ ನಡುವೆ ದ್ವೇಷ ಭಾವವನ್ನು ಪ್ರಚೋಧಿಸಿದ ಆಧಾರದಲ್ಲಿ ಐಪಿಸಿ ಸೆಕ್ಷನ್ 153ಎ ಹಾಗೂ 295ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಳೆ ಕಪಿಲ್ ಶಾಸ್ತ್ರಿಯ ವೈದ್ಯಕೀಯ ಪರೀಕ್ಷಾ ವರದಿ ಬಂದ ಬಳಿಕ ಆತ ಮಾನಸಿಕ ಅಸ್ವಸ್ಥನೋ ಇಲ್ಲವೋ ಎಂಬ ವಿಚಾರ ತಿಳಿಯಲಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಪ್ರಾಥಮಿಕ ಮಾಹಿತಿಯ ಪ್ರಕಾರ ಮಾನಸಿಕ ಅಸ್ವಸ್ಥ ಕಪಿಲ್ ಶಾಸ್ತ್ರಿ ಕೆಲ ವರ್ಷಗಳ ಹಿಂದೆ ಸಮೀಪದ ಗಲ್ಲಿಯೊಂದರಿಂದ ಪಾಕ್ ಧ್ವಜವನ್ನು ತಂದಿದ್ದು, ಇಂದು ಅದನ್ನು ಮಹಡಿ ಮೇಲೆ ಹಾರಿಸಿದ್ದಾನೆ ಎನ್ನಲಾಗಿದೆ.
Comments are closed.