ಬೆಂಗಳೂರು,ಆ.೧೪-ನಗರದ ಮಿಲ್ಲರ್ಸ್ ರಸ್ತೆಯ ಥಿಯಾಲಾಜಿಕಲ್ ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ನಡೆದ ಬ್ರೋಕನ್ ಫ್ಯಾಮಿಲೀಸ್ ಹೆಸರಿನ ಕಾರ್ಯಾಗಾರದ ವೇಳೆ ಸೇನೆ ವಿರುದ್ಧ ಘೋಷಣೆ ಕೂಗಿದ ಗುಂಪಿನ ವಿರುದ್ಧ ಜೆಸಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬ್ರೋಕನ್ ಫ್ಯಾಮಿಲೀಸ್ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕೆಲವರು, ಜಮ್ಮು ಕಾಶ್ಮೀರ ನಮ್ಮದಲ್ಲ ಪಾಕಿಸ್ತಾನಕ್ಕೆ ಕೊಡಿ ಎಂದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ನೀಡಿರುವ ದೂರಿನ ಮೇಲೆ ಪೊಲೀಸರು ಪ್ರಥಮ ಮಾಹಿತಿ ವರದಿ(ಎಫ್ಐಆರ್)ಹಾಕಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸುರೇಶ್ ಅವರು ತಿಳಿಸಿದ್ದಾರೆ.
ಕಾರ್ಯಾಗಾರದ ವೇಳೆ ಸೇನೆ ವಿರುದ್ಧ ಘೋಷಣೆ ಕೂಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಕಾಲೇಜು ಬಳಿ ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ಕಾಲೇಜು ಎದುರು ಪ್ರತಿಭಟನೆ ನಡೆಸಿ ಕಾರ್ಯಗಾರ ಆಯೋಜನೆಯಾಗಿದ್ದ ಕಾಲೇಜಿನ ಬೋರ್ಡ್ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿ ನಂತರ ಪೊಲೀಸರಿಗೆ ದೂರು ನೀಡಿದ್ದರು.
ಮತ್ತೆ ಇಂದು ಬೆಳಿಗ್ಗೆ ಕಾಲೇಜು ಬಳಿ ಪ್ರತಿಭಟನೆ ನಡೆಸಿ ಸೇನೆ ವಿರುದ್ಧ ಘೋಷಣೆ ಕೂಗಿದ ಗುಂಪಿನ ವಿರುದ್ಧ ಎಫ್ಐಆರ್ ದಾಖಲಿಸಿ ದೇಶ ದ್ರೋಹದ ಪ್ರಕರಣದ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು ಪೊಲೀಸರು ಎಫ್ಐಆರ್ ದಾಖಲಿಸಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಥಿಯಾಲಾಜಿಕಲ್ ಕಾಲೇಜಿನ ಸಭಾಂಗಣದಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ಇಂಡಿಯಾ ಸಂಸ್ಥೆಯು ಎರ್ಪಡಿಸಿದ್ದ ಬ್ರೋಕನ್ ಫ್ಯಾಮಿಲೀಸ್ ಕಾರ್ಯಗಾರದಲ್ಲಿ ಕಾಶ್ಮೀರ ಹಿಂಸಾಚಾರದಲ್ಲಿ ನೊಂದ ಕುಟುಂಬಗಳು ಭಾಗವಹಿಸಿದ್ದವು.
Comments are closed.