ಪ್ರೇಮ್ ನಿರ್ದೇಶನದ “ದಿ ವಿಲನ್’ ಚಿತ್ರದ ಒಂದೊಂದೇ ಸುದ್ದಿಗಳು ಹೊರಬರಲಾಂಭಿಸಿವೆ. ಶಿವರಾಜಕುಮಾರ್ ಹಾಗೂ ಸುದೀಪ್ ಜೊತೆಯಾಗಿ ನಟಿಸುತ್ತಿರುವ ಈ ಸಿನಿಮಾದ ಮುಹೂರ್ತ ಆಗಸ್ಟ್ 12 ರಂದು ಗೊರವನಹಳ್ಳಿ ಲಕ್ಷ್ಮೀ ದೇವಾಲಯದಲ್ಲಿ ನಡೆಯಲಿದೆ. ಅಂದು ವರಮಹಾಲಕ್ಷ್ಮೀ ಹಬ್ಬ ಬೇರೆ. ಪ್ರೇಮ್ ಪಾಲಿಗೆ ವರಮಹಾಲಕ್ಷ್ಮೀ ಅದೃಷ್ಟ. ಪ್ರೇಮ್ ನಿರ್ದೇಶನದ ಈ ಹಿಂದಿನ ಕೆಲವು ಚಿತ್ರಗಳು ಬಿಡುಗಡೆಯಾಗಿದ್ದು, ಆರಂಭವಾಗಿದ್ದು ಎಲ್ಲವೂ ವರಮಹಾಲಕ್ಷ್ಮೀ ದಿನವೇ. ಸೂಪರ್ ಹಿಟ್ ಜೋಗಿ ಕೂಡಾ ವರಮಹಾಲಕ್ಷ್ಮೀ ಹಬ್ಬದಂದೇ ಬಿಡುಗಡೆಯಾಗಿತ್ತು. ಅದೇ ಸೆಂಟಿಮೆಂಟ್ನೊಂದಿಗೆ ಪ್ರೇಮ್ ಈಗ “ದಿ ವಿಲನ್’ ಚಿತ್ರವನ್ನು ವರಮಹಾಲಕ್ಷ್ಮೀ ಹಬ್ಬದಂದೇ ಆರಂಭಿಸುತ್ತಿದ್ದಾರೆ. ಸರಳವಾಗಿ ಮುಹೂರ್ತ ನಡೆಯಲಿದ್ದು, ಚಿತ್ರತಂಡದ ಸದಸ್ಯರು ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಪ್ರೇಮ್ ನಿರ್ದೇಶನದ ಸಿನಿಮಾದ ಸುದ್ದಿ ಬರುತ್ತದೆ, ಆದರೆ ಸಿನಿಮಾ ಮಾತ್ರ ಆರಂಭವಾಗುವುದೇ ಇಲ್ಲ ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ. ಆದರೆ, ಈ ಬಾರಿ ಪ್ರೇಮ್ ಈ ಸಿನಿಮಾವನ್ನು ಮುಗಿಸಿದ ನಂತರವೇ ಮಾತನಾಡಲು ಬಯಸಿದಂತಿದೆ. ಹಾಗಾಗಿಯೇ ಸಿನಿಮಾ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಈ ನಡುವೆಯೇ “ದಿ ವಿಲನ್’ ಚಿತ್ರದ ನಾಯಕಿಯ ಸುದ್ದಿ ಓಡಾಡುತ್ತಿದೆ. ತೆಲುಗಿನಲ್ಲಿ ಬಿಝಿ ನಟಿ ಎನಿಸಿಕೊಂಡಿರುವ ತಮನ್ನಾ “ದಿ ವಿಲನ್’ಗೆ ನಾಯಕಿ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಇದು ಒಂದು ಸುದ್ದಿಯಾದರೆ ಬಾಲಿವುಡ್ನಲ್ಲಿ ಸದ್ದು ಮಾಡುತ್ತಿರುವ ಜಾಕ್ವೇಲಿನ್ ಫರ್ನಾಂಡೀಸ್ ಹೆಸರು ಕೂಡಾ ಜೋರಾಗಿಯೇ ಕೇಳಿಬರುತ್ತಿದೆ. ಆದರೆ, ಈ ಇಬ್ಬರಲ್ಲಿ ವಿಲನ್ ಜೊತೆ ಯಾರಿರುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೇ. “ತಮನ್ನಾ ಹಾಗೂ ಜಾಕ್ವೇಲಿನ್ ಇಬ್ಬರಲ್ಲೂ ಮಾತನಾಡಿದ್ದೇವೆ. ಇಬ್ಬರೂ ಪಾಸಿಟಿವ್ ಆಗಿದ್ದಾರೆ. ನಮಗೆ ಡೇಟ್ಸ್ ಕ್ಲಾéಶ್ ಆಗಬಾರದು. ನಮ್ಮ ಚಿತ್ರೀಕರಣಕ್ಕೆ ತೊಂದರೆಯಾಗದಂತೆ ಡೇಟ್ಸ್ ಸಿಗಬೇಕು. ಯಾರಾಗುತ್ತಾರೋ ನೋಡಬೇಕು’ ಎಂದು ನಾಯಕಿಯ ಆಯ್ಕೆ ಬಗ್ಗೆ ಮಾತನಾಡುತ್ತಾರೆ ಪ್ರೇಮ್.
ಚಿತ್ರದ ಚಿತ್ರೀಕರಣ ಅಕ್ಟೋಬರ್ನಲ್ಲಿ ಆರಂಭವಾಗಲಿದೆ. ಮೊದಲ ಹಂತವಾಗಿ ಸುದೀಪ್ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು, ಸುದೀಪ್ ಇರುವ ಬಹುತೇಕ ದೃಶ್ಯಗಳನ್ನು ಪ್ರೇಮ್ ಚಿತ್ರೀಕರಿಸಿಕೊಳ್ಳಲಿದ್ದಾರೆ. ಇಲ್ಲೂ ಸುದೀಪ್ ಅವರ ಹೇರ್ಸ್ಟೈಲ್ ಬದಲಾಗಲಿದೆ. ಆ ನಂತರ ಶಿವರಾಜಕುಮಾರ್ ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ನಡುವೆಯೇ ಪ್ರೇಮ್ ನಾಯಕರಾಗಿ ನಟಿಸಲಿರುವ “ಗಾಂಧಿಗಿರಿ’ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದು, ಸೆಪ್ಟೆಂಬರ್ವರೆಗೆ “ಗಾಂಧಿಗಿರಿ’ ತಂಡದ ಜೊತೆಗೆ ಪ್ರೇಮ್ ಇರಲಿದ್ದಾರೆ.
“ದಿ ವಿಲನ್’ ಚಿತ್ರದ ಅರ್ಧ ಚಿತ್ರೀಕರಣ ದೇಶದಲ್ಲಿ ನಡೆದರೆ ಇನ್ನರ್ಧ ವಿದೇಶದಲ್ಲಿ ನಡೆಯಲಿದೆಯಂತೆ. ಸದ್ಯ ಪ್ರೇಮ್ ಪಟ್ಟಿಯಲ್ಲಿ ಲಂಡನ್, ಲಾಸ್ ವೇಗಾಸ್ ಹಾಗೂ ರಷ್ಯಾ ಇದ್ದು, ಈ ಮೂರರಲ್ಲಿ ಒಂದು ದೇಶದಲ್ಲಿ “ದಿ ವಿಲನ್’ ಚಿತ್ರೀಕರಣ ನಡೆಯಲಿದೆ. ಕೇವಲ ಹಾಡು, ದೃಶ್ಯ ಅಷ್ಟೇ ಅಲ್ಲದೇ, ಫೈಟಿಂಗ್, ಚೇಸಿಂಗ್ ಕೂಡಾ ಅಲ್ಲಿ ಚಿತ್ರೀಕರಣವಾಗಲಿದೆಯಂತೆ.
ಅಕ್ಟೋಬರ್ನಲ್ಲಿ ಚಿತ್ರೀಕರಣಕ್ಕೆ ತೆರಳುವ ಮುನ್ನ ಅಂದರೆ ಸೆಪ್ಟೆಂಬರ್ ಕೊನೆ ವಾರದಲ್ಲಿ ಚಿತ್ರದ ಟೀಸರ್ವೊಂದನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುವ ಯೋಚನೆಯೂ ಪ್ರೇಮ್ಗಿದ್ದು, ಬೆಂಗಳೂರು ಅಥವಾ ಮೈಸೂರಲ್ಲಿ ಆ ಕಾರ್ಯಕ್ರಮ ನಡೆಯಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು, ಸತ್ಯ ಹೆಗಡೆ ಜೊತೆ ಕೆಲಸ ಕಲಿತಿರುವ ಗಿರಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
-ಉದಯವಾಣಿ
Comments are closed.