ಕರ್ನಾಟಕ

ರಾಜಕಾಲುವೆ ಕಟ್ಟಡ ನೆಲಸಮ : ಜೆಸಿಬಿಗಳ ಆರ್ಭಟ-ಸಂತ್ರಸ್ತರ ಆಕ್ರಂದನ

Pinterest LinkedIn Tumblr

rajaಬೆಂಗಳೂರು, ಆ. ೧೦- ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಮನೆಗಳು, ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಇಂದೂ ಸಹ ಮುಂದುವರಿಸಿದ್ದು, ಬೆಳಿಗ್ಗೆ ಯಲಹಂಕ ವಲಯದ ದೊಡ್ಡಬೊಮ್ಮಸಂದ್ರದಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳು, ಶೆಡ್‌ಗಳು, ಕಾಂಪೌಂಡ್‌ಗಳನ್ನು ಹೇಳ ಹೆಸರಿಲ್ಲದಂತೆ ನೆಲಸಮಗೊಳಿಸಿದೆ.

ದೊಡ್ಡಬೊಮ್ಮಸಂದ್ರ ಬಳಿ 32 ಅಡಿ ಅಗಲದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು 1.5 ಕಿ.ಮೀಟರ್ ಉದ್ದಕ್ಕೂ ಮನೆಗಳು, ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಆ ಭಾಗದಲ್ಲಿ ರಾಜಕಾಲುವೆಯೇ ಕಣ್ಮರೆಯಾಗಿದ್ದು ಮಳೆಯ ನೀರು ಸರಾಗವಾಗಿ ಹರಿಯದೆ ಅಲ್ಲಿನ ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದ್ದು, ಅಲ್ಲಿನ ನಿವಾಸಿಗಳು ಪ್ರತಿ ಮಳೆಗಾಲದಲ್ಲೂ ತೊಂದರೆ ಅನುಭವಿಸುತ್ತಿದ್ದರು.

ಬಿಬಿಎಂಪಿ ಅಧಿಕಾರಿಗಳು ಈ ಭಾಗದಲ್ಲಿ ಸುಮಾರು 60 ಮನೆಗಳನ್ನು ಅಕ್ರಮ ಎಂದು ಗುರುತಿಸಿದ್ದು, ಆ ಮನೆಗಳನ್ನು ಒಡೆದು ಹಾಕಲು ಕೈಗೊಂಡ ನಿರ್ಧಾರದಂತೆ ಇಂದು ಬೆಳಿಗ್ಗೆಯಿಂದ ಕಾರ್ಯಾಚರಣೆಯನ್ನು ಆರಂಭಿಸಿದೆ.

ಬೆಳಿಗ್ಗೆ 9.30ಕ್ಕೆ ಹಳೆ ಬೊಮ್ಮಸಂದ್ರ ಗ್ರಾಮದಿಂದ ದೊಡ್ಡ ಬೊಮ್ಮಸಂದ್ರ ಕೆರೆಯವರೆಗೆ ಒತ್ತುವರಿಯಾಗಿದ್ದ ರಾಜಕಾಲುವೆಯನ್ನು ತೆರವುಗೊಳಿಸಲು ಬಿಬಿಎಂಪಿ ಕಾರ್ಯಾಚರಣೆ ಪಡೆ ಜೆಸಿಬಿ ಯಂತ್ರಗಳನ್ನು ತರುತ್ತಿದ್ದಂತೆ ಮನೆ, ಕಟ್ಟಡ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದರು.

ಬಿಬಿಎಂಪಿ, ಬಿಡಿಎ ಅಧಿಕಾರಿಗಳಿಗೆ ನಕ್ಷೆ ಮತ್ತಿತರ ಮೂಲಭೂತ ಸೌಕರ್ಯಗಳಿಗಾಗಿ ಹಣ ಕೊಟ್ಟಿದ್ದೇವೆ. ಅವರೇ ನಮಗೆ ಮನೆ ಕಟ್ಟಿಕೊಳ್ಳಲು ಅನುಮತಿ ನೀಡಿದ್ದರು ಎಂದು ಕೆಲ ನಿವಾಸಿಗಳು ದೊಡ್ಡ ದನಿಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಣ ಕೊಟ್ಟಿದ್ದರೆ ಯಾರಿಗೆ ಕೊಟ್ಟಿದ್ದೀರಿ ಈಗಲೇ ಹೇಳಿ ಅವರ ವಿರುದ್ದ ಕ್ರಮಕೈಗೊಳ್ಳುತ್ತೇವೆ ಎಂಬ ಅಧಿಕಾರಿಗಳ ಪ್ರಶ್ನೆಗೆ ನಿವಾಸಿಗಳಲ್ಲಿ ಉತ್ತರವೇ ಇರಲಿಲ್ಲ.

ಯಲಹಂಕ ವಲಯದ ಜಂಟಿ ಆಯುಕ್ತ ಸರ್ಪರಾಜ್ ಖಾನ್ ಅವರು ಖುದ್ದು ಸ್ಥಳದಲ್ಲಿದ್ದುಕೊಂಡು ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಎಲ್ಲ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಕಾರ್ಯಾಚರಣೆ ಪಡೆಗೆ ಸೂಚನೆ ನೀಡುತ್ತಿದ್ದಂತೆ ನಿವಾಸಿಗಳ ಅಳಲನ್ನೂ ಲೆಕ್ಕಿಸದೆ ಜೆಸಿಬಿ ಯಂತ್ರಗಳು ಮನೆಗಳನ್ನು ತರಗಲೆಗಳಂತೆ ಕೆಡವಿ ಹಾಕಿದವು.

ನಿನ್ನೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಜಾಗಗಳನ್ನು ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳು ಗುರುತಿಸಿದರು. ಹಳೆ ಸರ್ವೆ ಮತ್ತು ಹೊಸ ಸರ್ವೆಯಲ್ಲಿ ಗೊಂದಲವುಂಟಾಗಿದ್ದರಿಂದ ಕೆಲ ಕಾಲ ನಿವಾಸಿಗಳು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು.

ಅಂತಿಮವಾಗಿ ಹಳೆ ಸರ್ವೆಯ ಪ್ರಕಾರವೇ ಮನೆಗಳನ್ನು ಕೆಡವಿ ಹಾಕುವುದಾಗಿ ಅಧಿಕಾರಿಗಳು ಭರವಸೆ ನೀಡಿ ಕಟ್ಟಡದ ಭಾಗಶಃ ಭಾಗಗಳನ್ನು ಜೆಸಿಬಿ ಯಂತ್ರಗಳಿಂದ ಕೆಡವಿ ಹಾಕಿ ರಾಜಕಾಲುವೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಮಹದೇವಪುರ ವಲಯದಲ್ಲಿ ಕಾರ್ಯಾಚರಣೆ ಸ್ಥಗಿತ
ಮಹದೇವಪುರ ವಲಯದ ಕಸವನಹಳ್ಳಿ ಮನೆ ಒಡೆಯುವ ಕಾರ್ಯಾಚರಣೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿರುವ ಬಿಬಿಎಂಪಿ ಇಂದು ಸಂಜೆಯೊಳಗೆ ಮನೆಯೊಳಗಿರುವ ಎಲ್ಲಾ ವಸ್ತುಗಳನ್ನು ಹೊರ ಸಾಗಿಸುವಂತೆ ಅಲ್ಲಿನ ನಿವಾಸಿಗಳಿಗೆ ಸೂಚನೆ ನೀಡಿದೆ.
ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವ ಆರು ಮನೆಗಳ ಮಾಲೀಕರು ಸ್ವಯಂಪ್ರೇರಿತವಾಗಿ ಕಟ್ಟಡಗಳನ್ನು ಒಡೆಯಲು ಮುಂದಾಗಿರುವುದರಿಂದ ಸಂಜೆಯೊಳಗೆ ಆ ಕಾರ್ಯವನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ನಾಳೆಯಿಂದ ಮನೆ ಒಡೆಯುವ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಕಸವನಹಳ್ಳಿಯ ನಿವಾಸಿಗಳು ಈಗಾಗಲೇ ತಮ್ಮ ಮನೆಗಳಿಂದ ದುಬಾರಿ ಮೌಲ್ಯದ ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್ ಹಾಗೂ ಮತ್ತಿತರ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾರಂಭಿಸಿದ್ದಾರೆ. ಅಲ್ಲದೇ, ತಾವೇ ಕಾರ್ಮಿಕರನ್ನು ಕರೆ ತಂದು ಒತ್ತುವರಿ ಮಾಡಿಕೊಂಡಿದ್ದ ಕಟ್ಟಡಗಳನ್ನು ಕೆಡವಿ ಹಾಕಲು ಮುಂದಾಗಿದ್ದಾರೆ.
ಇಂದು ಬೆಳಿಗ್ಗೆ ಜೆಸಿಬಿ ಯಂತ್ರಗಳ ಮೂಲಕ ಭಾಗಶಃ ಕಟ್ಟಡಗಳನ್ನು ಒಡೆಯಲು ಬಿಬಿಎಂಪಿ ಕಾರ್ಯಾಚರಣೆ ಪಡೆ ಮುಂದಾದಾಗ ತಾವೇ ಕಟ್ಟಡ‌ಗಳನ್ನು ಒಡೆಸಿಕೊಳ್ಳುವುದಾಗಿ ಭರವಸೆ ನೀಡಿದ ನಂತರ ಬಿಬಿಎಂಪಿ ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಕಾರ್ಯಾಚರಣೆಯನ್ನು ನಿಲ್ಲಿಸಿದ್ದಾರೆ.
ಈಗಾಗಲೇ ಒತ್ತುವರಿಯಿಂದ ಮುಕ್ತವಾಗಿರುವ ರಾಜಕಾಲುವೆ ಸರ್ವೆ ಕಾರ್ಯ ಆರಂಭವಾಗಿದ್ದು, ಮುಖ್ಯ ಕಾಲುವೆಯ ನಿರ್ಮಾಣ ಕಾರ್ಯವನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.