ಇಸ್ಲಾಮಾಬಾದ್: ಸಾರ್ಕ್ ಶೃಂಗಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾಷಣದ ವರದಿ ಮಾಡಲು ತೆರಳಿದ್ದ ಭಾರತದ ಮಾಧ್ಯಮಗಳು ಸೇರಿದಂತೆ ಯಾವುದೇ ಮಾಧ್ಯಮಗಳಿಗೂ ಅವಕಾಶ ನೀಡದೆ ಉದ್ಧಟತನ ಮೆರೆದ ಪಾಕಿಸ್ತಾನ, ಸರ್ಕಾರಿ ಮಾಧ್ಯಮ ಪಿಟಿವಿಗೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ವರದಿಯಾಗಿದೆ. ಸ್ಥಳೀಯ ಖಾಸಗಿ ವಾಹಿನಿಗಳಿಗೂ ಅವಕಾಶ ನೀಡಲಿಲ್ಲ ಎಂದು ವರದಿಗಳು ತಿಳಿಸಿವೆ.
ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಪಾಕ್ ಆಂತರಿಕ ಸಚಿವ ಚೌಧರಿ ನಿಸಾರ್ ಅವರ ಭಾಷಣಗಳ ವರದಿಗೆ ಕೂಡಾ ಪಿಟಿವಿಗೆ ಮಾತ್ರ ಅವಕಾಶ ನೀಡಲಾಗಿತ್ತು ಎಂದು ವರದಿಗಳು ಹೇಳಿವೆ.
ಹುತಾತ್ಮರಂತೆ ವೈಭವೀಕರಿಸಬೇಡಿ: ಉಗ್ರರನ್ನು ಹುತಾತ್ಮರಂತೆ ವೈಭವೀಕರಿಸಬೇಡಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಸ್ಲಾಮಾಬಾದಿನಲ್ಲಿ ನಡೆಯುತ್ತಿರುವ ಸಾರ್ಕ್ ಶೃಂಗ ಸಮ್ಮೇಳನದಲ್ಲಿ ಮಾತನಾಡುತ್ತ ಹೇಳಿದ್ದಾರೆ. ತಂತ್ರಜ್ಞಾನದ ಬಳಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಉಗ್ರರು ಎಲ್ಲೆಡೆ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದುಷ್ಟ ಅಥವಾ ಉತ್ತಮ ಎಂಬ ವಿಂಗಡಣೆಯನ್ನು ಭಯೋತ್ಪಾದನೆಯನ್ನು ವರ್ಗೀಕರಿಸಬೇಡಿ. ಉಗ್ರರಲ್ಲಿ ಒಳ್ಳೆಯವರು ಅಥವಾ ಕೆಟ್ಟವರು ಎಂಬುವವರಿಲ್ಲ, ಉಗ್ರರೆಲ್ಲ ಜಗತ್ತಿನ ನಾಶಕ್ಕೆ ಮುಂದಾಗುವವರು ಎಂದು ರಾಜನಾಥ್ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು. ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವನಿ ಹತ್ಯೆಯನ್ನು ಪಾಕಿಸ್ತಾನದಲ್ಲಿ ಹುತಾತ್ಮನೆಂದು ಬಿಂಬಿಸಿ ಶೋಕಾಚರಣೆ ಮಾಡಿರುವುದು ಉಗ್ರರಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗುವುದು ಎಂದರು.
ಉಗ್ರರಿಗೆ ಮತ್ತು ಉಗ್ರವಾದಕ್ಕೆ ಸಹಕಾರ ನೀಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜನಾಥ್ ಹೇಳಿದರು.
ಜಮಾತ್-ಉಲ್-ದಾವಾ ಮತ್ತು ಲಷ್ಕರ-ಎ-ತೊಯ್ಬ ಉಗ್ರ ಸಂಘಟನೆಗಳ ಹೆಸರು ಹೇಳದೆ ಪರೋಕ್ಷವಾಗಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದರು ಸಿಂಗ್. ಮೂಲಗಳ ಪ್ರಕಾರ ಪಾಕಿಸ್ತಾನ ಶೃಂಗಸಭೆಯಲ್ಲಿ ರಾಜನಾಥ್ ಭಾಷಣವನ್ನು ಚಿತ್ರಿಸಿ ಬಿತ್ತರಿಸಲು ಯಾವ ಮಾಧ್ಯಮಗಳಿಗೂ ಪಾಕಿಸ್ತಾನ ಅವಕಾಶ ನೀಡಿಲ್ಲ ಎಂದು ವರದಿಯಾಗಿದೆ. ಇದರಿಂದ ಬೇಸರಗೊಂಡ ಸಿಂಗ್ ಸಾರ್ಕ್ ಸಭೆಯಲ್ಲಿ ರಾಜನಾಥ್ ಸಿಂಗ್ ಮದ್ಯಾಹ್ನದ ಊಟ ಮಾಡಲಿಲ್ಲ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಗೃಹ ಸಚಿವ ಚೌಧರಿ ನಿಸಾರ್ ಕೂಡ ಶೃಂಗಸಭೆಯಲ್ಲಿ ಊಟ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಶೃಂಗಸಭೆ ನಂತರ ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದ ಸಿಂಗ್ ಭಾರತದತ್ತ ಪ್ರಯಾಣ ಬೆಳೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
Comments are closed.