ನಿರ್ದೇಶಕ ಪ್ರೇಮ್ “ಗಾಂಧಿಗಿರಿ’ ಎಂಬ ಸಿನಿಮಾದಲ್ಲಿ ನಟಿಸುತ್ತಾರೆಂಬ ಸುದ್ದಿ ಅನೇಕ ದಿನಗಳಿಂದ ಇತ್ತು. ಅದಕ್ಕೆ ಸರಿಯಾಗಿ ಫೋಟೋಶೂಟ್ ಆಗಿ ಪ್ರೇಮ್ ಇರುವ ಚಿತ್ರದ ಪೋಸ್ಟರ್ ಕೂಡಾ ಎಲ್ಲಾ ಕಡೆ ಓಡಾಡಿಕೊಂಡಿತ್ತು. ಆದರೆ, ಇತ್ತ ಕಡೆ ಪ್ರೇಮ್ ತಮ್ಮದೇ ಕೆಲಸ ಕಾರ್ಯಗಳಲ್ಲಿ ಬಿಝಿಯಾಗಿದ್ದರಿಂದ ಆ ಸಿನಿಮಾ ಯಾವಾಗ ಆರಂಭವಾಗುತ್ತದೆಂಬ ಬಗ್ಗೆ ಸ್ವತಃ ಆ ಚಿತ್ರದ ನಿರ್ದೇಶಕ ರಘು ಹಾಸನ್ ಅವರಿಗೆ ಗೊತ್ತಿರಲಿಲ್ಲ. ಈಗ “ಗಾಂಧಿಗಿರಿ’ ಚಿತ್ರಕ್ಕೆ ಮತ್ತೆ ಜೀವ ಬಂದಂತಿದೆ. ಅದು ಹೇಗೆ ಅಂದರೆ ಆ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಅದು ರಾಗಿಣಿ.
ಹೌದು, “ಗಾಂಧಿಗಿರಿ’ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ತೂಕ ಇಳಿಸಿಕೊಂಡು ಸಖತ್ ಸ್ಲಿಮ್ ಆಗಿರುವ ರಾಗಿಣಿಗೆ “ಗಾಂಧಿಗಿರಿ’ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇದೇ 17ರಿಂದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ. ಅಲ್ಲಿಗೆ ಪ್ರೇಮ್ ನಾಯಕರಾಗಿ ಮತ್ತೆ ಬಣ್ಣ ಹಚ್ಚುವುದು ಖಚಿತ. ಇತ್ತೀಚೆಗೆ ಅನೇಕ ಸಿನಿಮಾಗಳು ಅನೌನ್ಸ್ ಆದರೂ ಅದು ಮುಂದುವರೆಯಲಿಲ್ಲ. ಜೊತೆಗೆ ಪ್ರೇಮ್ ಕೂಡಾ ನಿರ್ದೇಶನ ಮಾಡುವ ಸಿದ್ಧತೆಯಲ್ಲಿದ್ದರು. ಈಗ ಪ್ರೇಮ್ “ಗಾಂಧಿಗಿರಿ’ಯಲ್ಲಿ ತೊಡಗಿಕೊಳ್ಳಲು ರೆಡಿಯಾಗಿದ್ದು, ಪ್ರೇಮ್ ನಿರ್ದೇಶನದ “ದಿ ವಿಲನ್’ ಚಿತ್ರ ಆಗಸ್ಟ್ 12 ರಂದು ಸೆಟ್ಟೇರಲಿದೆಯಂತೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಹಾಗೂ ಸುದೀಪ್ ನಟಿಸುತ್ತಿದ್ದಾರೆ. ಮುಹೂರ್ತ ಈಗ ನಡೆದರೂ ಚಿತ್ರೀಕರಣಕ್ಕೆ ಇನ್ನೂ ಸಾಕಷ್ಟು ಸಮಯವಿರುವುದರಿಂದ ಆ ಗ್ಯಾಪಲ್ಲಿ ಪ್ರೇಮ್ ಬಣ್ಣ ಹಚ್ಚಲು ಹೊರಟಿದ್ದಾರೆ. ಈಗ ಅವರಿಗೆ ನಾಯಕಿಯಾಗಿ ರಾಗಿಣಿ ಆಯ್ಕೆಯಾಗಿದ್ದಾರೆ.
ಇದಲ್ಲದೇ ರಾಗಿಣಿ “ಕಿಚ್ಚು’ ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಪ್ರದೀಪ್‌ರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ರಾಗಿಣಿಗೆ ಒಳ್ಳೆಯ ಪಾತ್ರವಿದೆಯಂತೆ. ಇದಲ್ಲದೇ “ನಾನೇ ನೆಕ್ಸ್ಟ್ ಸಿಎಂ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರದ ಒಂದು ಹಾಡಷ್ಟೇ ಬಾಕಿ ಇದೆ. ಅದು ಬಿಟ್ಟರೆ “ಹುಲಿದೇವರ ಕಾಡು’ ಚಿತ್ರ ಕೂಡಾ ರಾಗಿಣಿ ಕೈಯಲ್ಲಿದೆ. ಇದು ಕನ್ನಡದ ವಿಷಯವಾದರೆ ಮಲಯಾಳಂ ಹಾಗೂ ತೆಲುಗಿನಲ್ಲಿ ಒಂದೊಂದು ಸಿನಿಮಾ ಕೂಡಾ ಒಪ್ಪಿಕೊಂಡಿದ್ದಾರೆ. ಇದು ಸಿನಿಮಾ ವಿಷಯವಾದರೆ ಸದ್ಯ ರಾಗಿಣಿ ಕೆಪಿಎಲ್ ಕ್ರಿಕೆಟ್ ತಂಡದವನ್ನು ಖರೀದಿಸಿದ್ದಾರೆ.
-ಉದಯವಾಣಿ
Comments are closed.