ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮುನಿಸಿಪಲ್ ಕೌನ್ಸಿಲ್ ಹಸಿರು ಅಭಿಯಾನ ಹಮ್ಮಿಕೊಂಡು, ಕೇವಲ ಹದಿನೈದು ದಿನಗಳಲ್ಲಿ 1.15 ಲಕ್ಷ ಸಸಿಗಳನ್ನು ನೆಟ್ಟಿದೆ. ಆದರೆ ದೇಶದಲ್ಲಿ ಹಲವಾರು ಮಂದಿ ಸ್ವಯಂ ಪ್ರೇರಣೆಯಿಂದ ಸಸಿಗಳನ್ನು ನೆಟ್ಟು ಪೋಷಿಸುವ ಕಾಯಕ ಮಾಡುತ್ತಿದ್ದಾರೆ. ಮಾಜಿ ವಾಯುಪಡೆ ಅಧಿಕಾರಿ ಪುತ್ರಿ ರಾಧಿಕಾ ಆನಂದ ಅವರು ಇಂತಹ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು.
ಒಂದು ವರ್ಷದ ಅವಧಿಯಲ್ಲಿ 52ರ ಹರೆಯದ ರಾಧಿಕಾ ಅವರು 1.10 ಲಕ್ಷ ಹಣ್ಣಿನ ಸಸಿಗಳನ್ನು ದೇಶದ ವಿವಿಧೆಡೆಗಳಲ್ಲಿ ನೆಟ್ಟು ಪೋಷಿಸುತ್ತಾ ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ.
ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಕಾಯಕ ನಡೆಸಿರುವ ಅವರು ಇದಕ್ಕಾಗಿ ಕೆಲವು ಸಂಘಟನೆಗಳು ಮತ್ತು ಸ್ನೇಹಿತರ, ಹಿತೈಷಿಗಳ ನೆರವಿನ ಜೊತೆಗೆ ತಮ್ಮ ಕೈಯಿಂದಲೂ ಒಂದಷ್ಟು ಹಣ ಹಾಕಿದ್ದಾರೆ.
ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ಭೇಟಿ ನೀಡಿ ಮಾವು, ನೆಲ್ಲಿ, ಹುಣಸೆೆ, ನೇರಳೆ, ಹಲಸು ಸೇರಿದಂತೆ ಹಲವು ಬಗೆಯ ಹಣ್ಣಿನ ಗಿಡಗಳನ್ನು ನೆಟ್ಟು, ನೀರುಣಿಸಿದ್ದಾರೆ. ಈ ಕಾರ್ಯಕ್ಕೆ ಭಾರತೀಯ ಸೇನೆ ಕೂಡ ಕೈ ಜೋಡಿಸಿದೆ.
ತಮ್ಮ ಹೆತ್ತವರಿಂದಲೇ ಸ್ಪೂರ್ತಿ ಪಡೆದ ರಾಧಿಕಾ ಬಾಲ್ಯದಿಂದಲೂ ಪರಿಸರ ಕಾಳಜಿ ಹೊಂದಿದ್ದು, ಗಿಡ-ಮರಗಳೊಂದಿಗೆ ನಂಟು ಸ್ಥಾಪಿಸಿಕೊಂಡಿದ್ದಾರೆ. ಈಗಾಗಲೇ 500ಕ್ಕೂ ಅಧಿಕ ಕಾರ್ಯಯೋಜನೆ ಕೈಗೊಂಡ ಕೀರ್ತಿ ಇವರಿಗೆ ಸಲ್ಲುತ್ತದೆ. ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೆ ಮುಂದಿನ ವರ್ಷ ಎರಡು ಲಕ್ಷ ಗಿಡ ನೆಡುವ ಯೋಜನೆ ಹಾಕಿಕೊಂಡಿದ್ದಾರೆ.
Comments are closed.