
ಮಂಗಳೂರು, ಜು. 29: ಕೋಟೆಕಾರು ಅಡ್ಕದಲ್ಲಿ ಇಂದು ಮುಂಜಾನೆ ನಡೆದ ಭೀಕರ ಅಪಘಾತವೊಂದರಲ್ಲಿ ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತ ಹೊಂದಿದ ವ್ಯಕ್ತಿಯನ್ನು ಮಾಡೂರು ಸಮೀಪದ ಹರಿಬಡಾವಣೆಯ ನಿವಾಸಿ ನವೀನ್ (53) ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಕೇರಳದ ಕಡೆಗೆ ತೆರಳುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಉಂಟಾದ ಸರಣಿ ಅಪಘಾತದಲ್ಲಿ ಈ ದುರಂತ ಸಂಭವಿಸಿದೆ.
ಮಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಇನ್ನೋವ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಅಡ್ಕದ ಬಳಿ ಹೆದ್ದಾರಿಯ ಡಿವೈಡರ್ಗೆ ಢಿಕ್ಕಿ ಹೊಡೆದಿದೆ. ಕಾರು ಅತೀ ವೇಗದಲ್ಲಿದ್ದುದರಿಂದ ಡಿವೈಡರ್‌ನ ಮೇಲೇರಿ ವಿರುದ್ಧ ದಿಕ್ಕಿನ ಹೆದ್ದಾರಿ ರಸ್ತೆಯ ಮಧ್ಯ ಭಾಗದಲ್ಲಿ ಹಠಾತ್ ಬಂದು ನಿಂತಿದೆ.

ಈ ಸಂದರ್ಭದಲ್ಲಿ ಅದೇ ಹೆದ್ದಾರಿಯಲ್ಲಿ ಬರುತ್ತಿದ್ದ ಬೈಕ್ ಕಾರಿಗೆ ಢಿಕ್ಕಿ ಹೊಡೆದಿದೆ. ಇದರ ಬೆನ್ನಲ್ಲೇ ಬೈಕ್ ನ ಹಿಂದಿನಿಂದ ಬರುತ್ತಿದ್ದ 42 ನಂಬರ್‍ನ ವಿರಾಜ್ ಬಸ್ಸು ಬೈಕಿಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಸವಾರ ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಾರಿನಲ್ಲಿ ಇತರ ಪ್ರಯಾಣಿಕರು ಇದ್ದರೆನ್ನಲಾಗಿದ್ದು, ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
Comments are closed.