
ಬೆಂಗಳೂರು: ಹಲವು ಏಳುಬೀಳುಗಳ ನಡುವೆಯೇ ಜಾಗತಿಕ ಮಟ್ಟದಲ್ಲಿ ಈಗಲೂ ತನ್ನ ಛಾಪು ಮೂಡಿಸಿರುವ ಉದ್ಯಾನ ನಗರಿ ಬೆಂಗಳೂರಿನ ಹೆಗ್ಗುರುತಿಗೆ ಸದ್ಯದಲ್ಲೇ ಮತ್ತೊಂದು ದಾಖಲೆ ಸೇರ್ಪಡೆಯಾಗಲಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಇನ್ನು 2 ತಿಂಗಳೊಳಗೆ ಬೆಂಗಳೂರು ಮಹಾನಗರ ದೇಶದಲ್ಲೇ ಮೊಟ್ಟಮೊದಲ ಸೀಮೆಎಣ್ಣೆ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಸದ್ಯಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಪಂಜಾಬ್ ರಾಜಧಾನಿ ಚಂಡೀಗಡವನ್ನು ಸೀಮೆಎಣ್ಣೆ ಮುಕ್ತ ಮಹಾನಗರಗಳೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೆ ಈ ಎರಡೂ ನಗರಗಳು ಈಗಲೂ ಸೀಮೆಎಣ್ಣೆ ಬಳಕೆಯಿಂದ ಮುಕ್ತವಾಗಿಲ್ಲ.
ಬೆಂಗಳೂರಿನಲ್ಲಿ ಸದ್ಯದ ಅಂಕಿಅಂಶ ಪ್ರಕಾರ 30 ಸಾವಿರ ಬಡತನರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳು ಸೀಮೆಎಣ್ಣೆ ಬಳಕೆ ಮಾಡುತ್ತಿವೆ. ಬಹುತೇಕ ಕೊಳಗೇರಿ, ರಸ್ತೆ, ಪಾದಚಾರಿ ಮಾರ್ಗ ಹಾಗೂ ಖಾಲಿ ನಿವೇಶನಗಳಲ್ಲಿ ಹೊರಭಾಗಗಳಿಂದ ಇಲ್ಲವೆ, ಇತರ ರಾಜ್ಯಗಳಿಂದ ಬರುವ ಕಾರ್ಮಿಕರು ಸೀಮೆಎಣ್ಣೆ ಬಳಸುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿತರಣೆ ಮಾಡುವ ಸೀಮೆಎಣ್ಣೆ ಬಳಕೆ ಮಾಡುವ ಇವರಿಗೆ ಗ್ಯಾಸ್ ಖರೀದಿ ಮಾಡಲು ಕನಿಷ್ಠ 5ಸಾವಿರ ರೂ. ವೆಚ್ಚ ತಗಲುತ್ತದೆ. ಹಾಗಾಗಿ ಸೀಮೆಎಣ್ಣೆ ಮೇಲೆ ಅವಲಂಬಿತವಾಗಿದ್ದಾರೆ.
ಉಚಿತ ಗ್ಯಾಸ್ ವಿತರಣೆ:
ಇದೀಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೀಮೆಎಣ್ಣೆ ಬಳಕೆ ಮಾಡುವ ಕುಟುಂಬಗಳ ಸಮೀಕ್ಷೆ ನಡೆಸಿದೆ. ಗ್ಯಾಸ್ ಖರೀದಿಸಲು ಸಾಧ್ಯವಿಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಮುಂದಿನ ತಿಂಗಳಿನಿಂದ ಉಚಿತ ಗ್ಯಾಸ್ ವಿತರಣೆಯಾಗಲಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಪ್ರಧಾನ ಮಂತ್ರಿನರೇಂದ್ರ ಮೋದಿಯವರು ದೇಶದಲ್ಲಿ ಸೀಮೆಎಣ್ಣೆ ಬಳಕೆ ಕಡಿತಗೊಳಿಸಲು ಉಜ್ವಲ ಎಂಬ ಯೋಜನೆಯೊಂದನ್ನು ರೂಪಿಸಿದ್ದರು. ಈ ಯೋಜನೆಯಡಿ ಯಾರು ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುತ್ತಾರೋ ಅವರಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿತ್ತು. ಸೀಮೆಎಣ್ಣೆ , ಉರುವಲು ಬಳಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕುವ ಸದುದ್ದೇಶದಿಂದಲೇ ಉಜ್ವಲ ಯೋಜನೆಯಡಿ ಉಚಿತವಾಗಿ ಪ್ರತಿಯೊಂದು ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ.
ಸೀಮೆಎಣ್ಣೆ ಬಳಕೆ ಇಳಿಕೆ:
ಕಳೆದ ಆರು ತಿಂಗಳಿನಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸೀಮೆಎಣ್ಣೆ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಬೆಂಗಳೂರು ಮಹಾನಗರವೊಂದರಲ್ಲೇ ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡುತ್ತಿದ್ದ 90 ಸಾವಿರ ಲೀಟರ್ ಸೀಮೆಎಣ್ಣೆ 2 ತಿಂಗಳಿನಿಂದ 30 ಸಾವಿರ ಲೀಟರ್ಗೆ ಇಳಿಕೆಯಾಗಿದೆ ಎಂದು ತಿಳಿದು ಬಂದಿದೆ.
ವಿತರಣೆಯಾಗದೆ ಉಳಿದ 60 ಸಾವಿರ ಲೀಟರ್ ಸೀಮೆಎಣ್ಣೆಯನ್ನು ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಿರುವ ಪರಿಣಾಮ ರಾಜ್ಯಕ್ಕೆ ಸುಮಾರು 90 ಕೋಟಿ ಅನುದಾನ ಲಭ್ಯವಾಗಿದೆ. ಯಾವ ರಾಜ್ಯ ಸೀಮೆಎಣ್ಣೆ ಬಳಕೆ ಮಾಡುವುದಿಲ್ಲವೋ ಅದಕ್ಕೆ ನಿಗದಿಪಡಿಸಿರುವ ಅನುದಾನವನ್ನು ನಗದು ರೂಪದಲ್ಲಿ ಆಯಾ ರಾಜ್ಯಗಳಿಗೆ ನೀಡಬೇಕೆಂದು ಖುದ್ದು ಪ್ರಧಾನಿಯೇ ಪೆಟ್ರೋಲಿಯಂ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ.
ಇದೀಗ ಕೇಂದ್ರದಿಂದ ಬಂದಿರುವ 90 ಕೋಟಿ ಅನುದಾನದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಎರಡು ತಿಂಗಳೊಳಗೆ ಉದ್ಯಾನ ನಗರಿ ದೇಶದಲ್ಲೇ ಮೊಟ್ಟಮೊದಲ ಸೀಮೆಎಣ್ಣೆ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Comments are closed.