ಕರಾವಳಿ

ಸುಂದರ ಮಲೆಕುಡಿಯರ ಕೈಕಟ್ ಪ್ರಕರಣಕ್ಕೆ ಒಂದು ವರ್ಷ : ಊಟ ಮಾಡಲೂ ಕಷ್ಟಪಡುತ್ತಿರುವ ಸುಂದರ ಅವರಿಗೆ ಮರೀಚಿಕೆಯಾಗಿಯೇ ಉಳಿದ ನ್ಯಾಯದ ಭರವಸೆ

Pinterest LinkedIn Tumblr

 

sundara_malekuriya_1

ಮಂಗಳೂರು / ಬೆಳ್ತಂಗಡಿ, ಜು.26 ; ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ಸುಂದರ ಮಲೆಕುಡಿಯರ ಕೈ ಕತ್ತರಿಸಿದ ಪ್ರಕರಣ ನಡೆದು ಒಂದು ವರ್ಷ ಕಳೆದರೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಮಾತ್ರ ಸಿಕ್ಕಿಲ್ಲ. ಸುಂದರ ಮಲೆಕುಡಿಯ ಅವರ ಎಡಗೈ ಕತ್ತರಿಸಿ ಹೋಗಿದ್ದು ಬೆರಳುಗಳೇ ಇಲ್ಲ. ಇನ್ನು ಬಲಗೈಯ ಮೂರು ಬೆರಳುಗಳು ತುಂಡಾಗಿದ್ದು ಊಟ ಮಾಡಲೂ ಸಾಧ್ಯವಿಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಪ್ರಕರಣದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು, ಮಲೆಕುಡಿಯ ಕುಟುಂಬ ಇನ್ನೂ ಭಯದ ನೆರಳಲ್ಲೇ ದಿನದೂಡುತ್ತಿದೆ.

ಸುಂದರ ಮೇಲೆ ನಡೆದ ಅಮಾನುಷ ಹಲ್ಲೆಯ ಬಳಿಕ ಅವರ ಜಮೀನಿಗೆ ಹಕ್ಕುಪತ್ರ ಕೊಡುತ್ತೇವೆ, ಅಂಗವಿಕಲ ವೇತನ ನೀಡುತ್ತೇವೆ ಎಂಬಂತಹ ಭರವಸೆಗಳು ದೊರೆತು ವರ್ಷ ಕಳೆದರೂ ಇದಾವುದೂ ಈಡೇರಿಲ್ಲ. ಇವರ ಮಗ ಪೂರ್ಣೇಶನ ಅಲ್ಪ ದುಡಿಮೆಯಲ್ಲೇ ಇಡೀ ಕುಟುಂಬವನ್ನು ಸಾಕಬೇಕಾದ ಸ್ಥಿತಿಯಿದೆ. ೨೦೧೫ರ ಜು.೨೫ರಂದು ಸಂಜೆಯ ವೇಳೆ ಸುಂದರ ಮಲೆಕುಡಿಯ ಹಾಗೂ ಕುಟುಂಬದವರ ಮೇಲೆ ಸ್ಥಳೀಯ ಭೂಮಾಲಕ ಗೋಪಾಲಗೌಡ ಹಾಗೂ ಆತನ ತಂಗಿ ಮತ್ತು ತಂಡ ದಾಳಿ ನಡೆಸಿದೆ. ಕಳೆ ಕತ್ತರಿಸುವ ಯಂತ್ರದಲ್ಲಿ ದಾಳಿ ನಡೆಸಿದ್ದರಿಂದ ಸುಂದರ ಮಲೆಕುಡಿಯರು ಎರಡು ಕೈಗಳನ್ನೂ ಕಳೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿದ ಸುಂದರ ಮಲೆಕುಡಿಯ ಕೊನೆಗೂ ಎರಡೂ ಕೈ ಗಳಿಗೆ ಸ್ವಾದೀನತೆಯಿಲ್ಲದೆ ಜೀವ ಉಳಿಸಿಕೊಂಡಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಆಡಳಿತ ಆಸ್ಪತ್ರೆಯ ಖರ್ಚನ್ನು ಮಾತ್ರ ವಹಿಸಿಕೊಂಡಿದೆ.

ದಶಕಗಳ ಹಿಂದೆಯೇ ಇದೇ ಗೋಪಾಲ ಗೌಡ ನಡೆಸಿದ ದಾಳಿಯಲ್ಲಿ ಸುಂದರ ಮಲೆಕುಡಿಯ ಅವರ ಪತ್ನಿ ರೇವತಿ ಅವರು ಒಂದು ಕೈಯ ಮೂರು ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಇಡೀ ಕುಟುಂಬಕ್ಕೆ ಆಧಾರ ಪೂರ್ಣೇಶನೇ ಆಗಿದ್ದಾನೆ. ಚಿಕಿತ್ಸೆಯನ್ನು ಮುಂದುವರಿಸುವಂತೆ ವೈದ್ಯರುಗಳು ಹೇಳಿದ್ದಾರೆ. ಆದರೆ ಮಂಗಳೂರಿಗೆ ಹೋಗಲು ಬಸ್ ಚಾರ್ಜ್‌ಗೂ ಹಣವಿಲ್ಲದ ಈ ಕುಟುಂಬ ಚಿಕಿತ್ಸೆ ಮುಂದುವರಿಸುವುದಾದರೂ ಹೇಗೆ ಎಂದು ಚಿಂತೆಯಲ್ಲಿದೆ.

ಸುಂದರ ಮಲೆಕುಡಿಯರಿಗೆ ನ್ಯಾಯ ಕೊಡಿಸಲು ಬೆಳ್ತಂಗಡಿಯಲ್ಲಿ ಭಾರೀ ಹೋರಾಟಗಳೇ ನಡೆದಿತ್ತು. ಕೊನೆಗೂ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಇದೀಗ ನ್ಯಾಯಾಲಯದಿಂದ ಇದೊಂದು ಜಾತಿ ನಿಂದನೆ ಪ್ರಕರಣವಲ್ಲ ಜಮೀನು ಗಲಾಟೆ ಮಾತ್ರ ಎಂದು ಕೇಸ್ ನಡೆಯುತ್ತಿದೆ. ಪ್ರಭಾವಿಗಳಾಗಿರುವ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಸುಂದರ ಮಲೆಕುಡಿಯ ಮಾತ್ರ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿ ಬದುಕನ್ನು ನಡೆಸುತ್ತಿದ್ದಾರೆ.

ಆರೋಪಿಗಳಿಗೆ ಶಿಕ್ಷೆಯಾಗಬೇಕು..!

ಮಾಧ್ಯಮದೊಂದಿಗೆ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ ಲಾಯಿಲ ಅವರು. ಅಂಗವೈಕಲ್ಯಕ್ಕೆ ತುತ್ತಾಗಿರುವ ಸುಂದರ ಮಲೆಕುಡಿಯರ ಕುಟುಂಬಕ್ಕೆ ಇನ್ನೂ ನ್ಯಾಯ ದೊರಕಿಲ್ಲ. ಅವರಿಗೆ ಕೂಡಲೇ ಅಂಗವಿಕಲ ವೇತನ ನೀಡಲು ಜಿಲ್ಲಾಡಳಿತ ಕ್ರಮ ಜರುಗಿಸಬೇಕು. ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕು. ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಮೇಲೆ ಹಾಕಲಾಗಿದ್ದ ಜಾತಿನಿಂದನೆ ಪ್ರಕರಣವನ್ನು ನ್ಯಾಯಾಲಯ ತೆಗೆದು ಹಾಕಿದೆ.

ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಮತ್ತೆ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು. ಆರೋಪಿಗಳಿಗೆ ಶಿಕ್ಷೆಯಾಗಬೇಕು. ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಭೂಮಾಲಕರ ದೌರ್ಜನ್ಯ ಕೊನೆಯಾಗದು ಎಂದು ಅಕ್ರೋಷ ವ್ಯಕ್ತಪಡಿಸಿದ್ದಾರೆ.

Comments are closed.