
ಬೆಂಗಳೂರು: ಪಕ್ಷದ ಸಂಘಟನೆ ಹಾಗೂ ಕೇಂದ್ರ -ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟ ಮಾಡಲು ಆಷಾಢಮಾಸದ ನಂತರ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 5ರ ನಂತರ ಮೂರು ತಂಡ ರಚಿಸಿಕೊಂಡು ನಾನು, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ ಜಿಲ್ಲಾವಾರು ಸಮಸ್ಯೆಗಳ ಬಗ್ಗೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
2018ರ ವೇಳೆಗೆ ರಾಜ್ಯದ ಜನತೆ ಜೆಡಿಎಸ್‌ಗೆ ಅವಕಾಶ ಕೊಡಬೇಕೆಂಬ ಆಶಯ ಹೊಂದಿದ್ದಾರೆ. ನಾನು ಪ್ರವಾಸಕ್ಕೆ ಹೋದಾಗ ಇದು ವ್ಯಕ್ತವಾಗಿದೆ ಎಂದು ಹೇಳಿದರು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಬಗ್ಗೆ ಬಿಜೆಪಿ ಸಂಸದ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಪಕ್ಷದಿಂದ ಉಚ್ಛಾಟನೆ ಮಾಡುವುದಷ್ಟೆ ಅಲ್ಲ, ಎಲ್ಲ ರೀತಿಯ ಮೊಕದ್ದಮೆ ಅವರ ವಿರುದ್ಧ ಹೂಡಬೇಕು ಎಂದು ಆಗ್ರಹಿಸಿದ ದೇವೇಗೌಡರು, ಒಮ್ಮೆ ಆ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದೆವು. ಇಂತಹ ಬೆಳವಣಿಗೆ ರಾಷ್ಟ್ರೀಯತೆಗೆ ಧಕ್ಕೆ ತರುವ ಅಪಾಯವಿದೆ ಎಂದು ಹೇಳಿದರು.
ಗುಜರಾತ್‌ನ ದಲಿತರ ಮೇಲಿನ ಹಲ್ಲೆ ಪ್ರಕರಣ ಅಮಾನವೀಯವಾದುದು. ರಾಷ್ಟ್ರೀಯ ಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಸಿದ ಆರೋಪಿ ಅಕಾರಿಯೊಬ್ಬರನ್ನು ದೆಹಲಿಗೆ ಕಳುಹಿಸಲಾಗಿದೆ ಎಂದು ಟೀಕಿಸಿದರು.
ಆಡಳಿತ ವ್ಯವಸ್ಥೆ ತೀವ್ರ ಕುಸಿತ:
ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ತೀವ್ರವಾಗಿ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದ ದೇವೇಗೌಡರು, ಆಡಳಿತ ಕುಸಿಯಲು ಹಲವಾರು ಉದಾಹರಣೆಗಳಿವೆ ಎಂದು ಹೇಳಿದರು.
ತನಿಖೆಗೆ ಆಗ್ರಹ:
ಹಾಸನದ ಎಸಿ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ತನಿಖೆ ನಡೆಸಬೇಕು. ಎಸಿ ವಿಜಯಾ ಅವರ ಆತ್ಮಹತ್ಯೆ ಯತ್ನ ತಡೆದಂತಹ ಅಡಿಷನಲ್ ಎಸ್ಪಿಯವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿಸಿದರು. ಈಗ ಮೊಬೈಲ್ ಕೂಡ ನಾಪತ್ತೆಯಾಗಿದೆ. ಅಡಿಷನಲ್ ಎಸ್ಪಿ ಕೂಡ ಸಾರ್ವಜನಿಕವಾಗಿ ಸಿಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ಪಕ್ಷದವರಿರಲಿ ಅಥವಾ ಎಂಥಹ ವ್ಯಕ್ತಿಯೇ ಇರಲಿ ತನಿಖೆಯಾಗಬೇಕು ಹಾಗೂ ಕ್ರಮ ಜರುಗಲೇಬೇಕು ಎಂದು ಇದೇ ವೇಳೆ ದೇವೇಗೌಡರು ಒತ್ತಾಯಿಸಿದರು.
Comments are closed.