ಕರಾವಳಿ

ಕುಂದಾಪುರ(ಕರ್ಕುಂಜೆ): ನದಿಯಲ್ಲಿ ಕೊಚ್ಚಿಹೋದ ಮೀನುಗಾರನ ಶವ ಪತ್ತೆ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಮೀನು ಹಿಡಿಯಲೆಂದು ದೋಣಿಯಲ್ಲಿ ತೆರೆಳಿದ ವ್ಯಕ್ತಿಯೋರ್ವರು ನದಿಯಲ್ಲಿ ಬಿದ್ದು ಕೊಚ್ಚಿಹೋದ ಘಟನೆ ಶನಿವಾರ ಸಂಜೆ ನಡೆದಿದ್ದು ಭಾನುವಾರ ಸಂಜೆ ವೇಳೆಗೆ ನಾಪತ್ತೆಯಾದ ಮೀನುಗಾರ ಶವವಾಗಿ ಪತ್ತೆಯಾದ ಘಟನೆ ವರದಿಯಾಗಿದೆ.

ಕುಂದಾಪುರದ ಕರ್ಕುಂಜೆ ನಿವಾಸಿ ಸಂಜೀವ ಮೊಗವೀರ(53) ಮೃತ ಮೀನುಗಾರ.

karkunje_Fisherman_Death (1) karkunje_Fisherman_Death (2) karkunje_Fisherman_Death (6) karkunje_Fisherman_Death (5) karkunje_Fisherman_Death (4) karkunje_Fisherman_Death (3)

ಘಟನೆ ವಿವರ: ಸಂಜೀವ ಅವರು ಬಾಲ್ಯದಿಂದಲೂ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಗೋವಾದಲ್ಲಿ ಸದ್ಯ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ವರ್ಷಂಪ್ರತಿ ೨ ತಿಂಗಳ ಕಾಲ ಮಳೆಗಾಲದ ರಜೆಯಲ್ಲಿ ಊರಿಗೆ ಬಂದಾಗ ಗಾಳ ಹಾಗೂ ಬಲೆ ಮೂಲಕ ಮೀನು ಹಿಡಿಯುವ ಕಾಯಕ ಮಾಡಿಕೊಂಡಿದ್ದ ಅವರು ಈ ಬಾರಿ ರಜೆಗಾಗಿ ಊರಿಗೆ ಬಂದಾಗ ಮೀನುಗಾರಿಕೆಗಾಗಿ ದೋಣಿಯೊಂದನ್ನು ಖರೀದಿಸಿದ್ದರು. ಶನಿವಾರ ಮಾಧ್ಯಾಹ್ನ ೩ ಗಂಟೆ ಸುಮಾರಿಗೆ ಮನೆಯಿಂದ ಮೀನು ಹಿಡಿಯಲು ವಂಡ್ಸೆ ಸಮೀಪದ ಚಕ್ರಾನದಿಯ ನೆಲ್ಲಿಮಕ್ಕಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸಂಜೆಯಾದರೂ ಅವರು ವಾಪಾಸ್ಸಾಗದ ಹಿನ್ನೆಲೆ ಅವರ ಪತ್ನಿ ಆಸುಪಾಸಿನವರು ಹಾಗೂ ಸಂಬಂಧಿಕರಿಗೆ ವಿಚಾರ ತಿಳಿಸಿ ಎಲ್ಲರೂ ಹುಡುಕಾಟ ನಡೆಸಿದ್ದರು.

ಅವರು ಮಾಮೂಲಿಯಾಗಿ ದೋಣಿ ನಿಲ್ಲಿಸುತ್ತಿದ್ದ ನದಿ ದಡದಲ್ಲಿ ಹುಡುಕುತ್ತಾ ತೆರಳಿದಾಗ ದೋಣಿ ಪತ್ತೆಯಾಗಿದೆ. ದೋಣಿ ಒಂದು ಭಾಗವನ್ನು ಮಾತ್ರ ಹಗ್ಗದಲ್ಲಿ ಕಟ್ಟಿದ್ದು ಕಂಡುಬಂದಿದ್ದು ಸಂಜೀವ ಅವರು ದೋಣಿಯಿಂದ ಇಳಿದು ದಡಕ್ಕೆ ಬಾರದೇ ನೀರಿನಲ್ಲಿ ಬಿದ್ದಿರುವುದು ಮೇಲ್ನೋಟಕ್ಕೆ ತಿಳಿದುಬಂದಿದ್ದಲ್ಲದೇ ಸಂಜೀವ ಅವರ ವಿಳ್ಯೆದೆಲೆ ಚೀಲ ಹಾಗೂ ಗಾಳ ದೋಣಿಯೊಳಗೆ ಸಿಕ್ಕಿದೆ. ತಡರಾತ್ರಿಯವರೆಗೂ ಸ್ಥಳೀಯರು ಹಾಗೂ ಸಂಬಂಧಿಕರು ಸತತ ಹುಡುಕಾಟ ನಡೆಸಿದ್ದಲ್ಲದೇ ಭಾನುವಾರ ಬೆಳಿಗ್ಗೆಯೂ ಕೂಡ ಕುಂದಾಪುರ ಅಗ್ನಿಶಾಮಕ ದಳದವರು ಹಾಗೂ ಈಜುಪಟುಗಳು, ಮುಳುಗು ತಜ್ಞರು ಶೋಧ ಕಾರ್ಯ ನಡೆಸಿದ್ದರು.

ಭಾನುವಾರ ಸಂಜೆ ವೇಳೆಗೆ ಕುಂದಪುರದ ಬಗ್ವಾಡಿ ಸಮೀಪದ ಬ್ರಿಡ್ಜ್ ಕೆಳಭಾಗದಲ್ಲಿ ಸಂಜೀವ ಅವರ ಶವ ಪತ್ತೆಯಾಗಿದೆ. ಸದ್ಯ ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಸಂಜೀವ ಅವರು ಮೀನುಗಾರಿಕೆಯನ್ನೇ ಕಸುಬು ಮಾಡಿಕೊಂಡ ಕಷ್ಟಜೀವಿಯಾಗಿದ್ದು ಇದೇ ತಿಂಗಳ ಅಂತ್ಯದಲ್ಲಿ ಗೋವಾಕ್ಕೆ ಪುನಃ ಮೀನುಗಾರಿಕೆಗೆ ತೆರಳುವವರಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.